ವಿಶಾಖಪಟ್ಟಣಂ(ಆಂಧ್ರಪ್ರದೇಶ):ಪೋಷಕರ ವಿರೋಧ ಕಟ್ಟಿಕೊಂಡು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶದ ಜನಪ್ರಿಯ ಕೂಚಿಪುಡಿ ನೃತ್ಯ ಕಲಿತಿರುವ ಮಹಿಳೆ ವಿಶ್ವದಾಖಲೆ ಬರೆದಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನೃತ್ಯದ ಬಗ್ಗೆ ಅಪಾರ ಒಲವು ಹೊಂದಿದ್ದ ಲಿಖಿತಾ ಎಂಬವರು, ಹಣಕಾಸಿನ ತೊಂದರೆಯ ಹೊರತಾಗಿಯೂ ಕಬ್ಬಿಣದ ಮೊಳೆಗಳ ಸ್ಟ್ಯಾಂಡ್ ಮೇಲೆ ಬರಿಗಾಲಲ್ಲೇ ಆಕರ್ಷಕ ನೃತ್ಯ ಪ್ರದರ್ಶನ ಮಾಡಿ ವಿಶ್ವದಾಖಲೆ ಬರೆದರು.
ವಿಶಾಖಪಟ್ಟಣಂ ನಿವಾಸಿ ಲಿಖಿತಾ, 9 ನಿಮಿಷಗಳ ಕಾಲ ದುರ್ಗಾ ಸ್ತುತಿಗೆ ಮನಮೋಹಕವಾಗಿ ನೃತ್ಯ ಮಾಡುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಹೈದರಾಬಾದ್ನ ಪೊಟ್ಟಿ ಶ್ರೀರಾಮುಲು ತೆಲುಗು ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ನೃತ್ಯ ಪ್ರದರ್ಶನ ನೀಡಿರುವ ಅವರು, ನೆರೆದಿದ್ದವರನ್ನು ಬೆರಗುಗೊಳಿಸಿದರು. ಬಾಲ್ಯದಲ್ಲಿ ಕೂಚಿಪುಡಿ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಲಿಖಿತಾ ಆಕಸ್ಮಿಕವಾಗಿ ಕೆಳಗೆ ಬಿದ್ದು ಬಲ ಪಾದಕ್ಕೆ ಗಾಯ ಮಾಡಿಕೊಂಡಿದ್ದರು. ಇದಾದ ಬಳಿಕ ನೃತ್ಯದಿಂದ ದೂರ ಉಳಿಯುವಂತೆ ಸೂಚನೆ ನೀಡಲಾಗಿತ್ತು. ಆದರೆ, ಎಲ್ಲ ರೀತಿಯ ನೋವು ಸಹಿಸಿಕೊಂಡು, ಅವಿರತ ಕಠಿಣ ಪ್ರಯತ್ನದಿಂದ ಇದೀಗ ವಿಶ್ವದಾಖಲೆಯ ಸಾಧನೆ ಮಾಡಿದ್ದಾರೆ.