ನಾಗ್ಪುರ್(ಮಹಾರಾಷ್ಟ್ರ): ನಾಗ್ಪುರದ ಖಾಪ್ರಿಯಲ್ಲಿರುವ ಮಹಿಳೆಯೊಬ್ಬರ ಮನೆ ಮೇಲೆ ಬೆಲ್ತರೋಡಿ ಪೊಲೀಸರ ತಂಡ ದಾಳಿ ನಡೆಸಿ ಸುಮಾರು 12,000 ಲೀಟರ್ ಅಕ್ರಮ ಪೆಟ್ರೋಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಮಹಿಳೆ ಸೇರಿದಂತೆ ಮೂವರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ಪ್ರಕರಣ?
ಮಹಾರಾಷ್ಟ್ರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 110ರೂ. ಇದೆ. ಆದರೆ, ಮೀನಾ ದ್ವಿವೇದಿ ಎಂಬ ಮಹಿಳೆ ಅಕ್ರಮವಾಗಿ ಕೇವಲ 77ರೂಪಾಯಿಗೆ ಲೀಟರ್ ಪೆಟ್ರೋಲ್ ಮಾರಾಟ ಮಾಡ್ತಿದ್ದಳು. ಹಲವು ತಿಂಗಳಿಂದ ಈ ದಂಧೆ ನಡೆಸುತ್ತಿದ್ದರು. ಇದರ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ದಾಳಿ ನಡೆಸಿದಾಗ 12 ಸಾವಿರ ಲೀಟರ್ ಪೆಟ್ರೋಲ್ ಮನೆಯಲ್ಲಿ ಅಕ್ರಮವಾಗಿ ಸಿಕ್ಕಿದೆ.
ಮಹಿಳೆಗೆ ಹೇಗೆ ಸಿಗುತ್ತಿತ್ತು ಪೆಟ್ರೋಲ್?
ವಿವಿಧ ಪೆಟ್ರೋಲ್ ಪಂಪ್ಗಳಿಗೆ ಟ್ಯಾಂಕರ್ ಮೂಲಕ ಸಾಗಿಸುತ್ತಿದ್ದ ತೈಲವನ್ನ ಚಾಲಕರ ಸಹಾಯದಿಂದ ಮಹಿಳೆ ಅಕ್ರಮವಾಗಿ ಪಡೆದುಕೊಳ್ಳುತ್ತಿದ್ದಳು. ಇದರ ಜೊತೆಗೆ ಅದರಲ್ಲಿ ಸೀಮೆ ಎಣ್ಣೆ ಹಾಗೂ ಇತರ ವಸ್ತು ಕಲಬೆರಕೆ ಮಾಡ್ತಿದ್ದಳು. ವಿದರ್ಭ ಪೆಟ್ರೋಲ್ ಡಿಪೋದಿಂದ ನಿತ್ಯ ನೂರಾರು ಪೆಟ್ರೋಲ್ ಟ್ಯಾಂಕರ್ಗಳು ವಿವಿಧ ಪ್ರದೇಶಗಳಿಗೆ ತೆರಳುತ್ತಿದ್ದವು. ಆದರೆ, ಕೆಲವೊಂದು ಟ್ಯಾಂಕರ್ಗಳು ಪೆಟ್ರೋಲ್ ಪಂಪ್ ತಲುಪುವ ಮುನ್ನವೇ ಅದರಲ್ಲಿನ ನೂರಾರು ಲೀಟರ್ ತೈಲ ಕಳ್ಳತನವಾಗುತ್ತಿತ್ತು. ಇದರ ಬಗ್ಗೆ ದೂರು ಸಹ ದಾಖಲಾಗಿತ್ತು.
ಇದನ್ನೂ ಓದಿರಿ:ರೈತರ ಪ್ರತಿಭಟನೆ ಅಂತ್ಯಗೊಳಿಸುವ ಬಗ್ಗೆ ನಾಳೆ ಫೈನಲ್ ನಿರ್ಧಾರ : ರಾಕೇಶ್ ಟಿಕಾಯತ್
ಪ್ರಕರಣ ಬೆನ್ನಟ್ಟಿ ಯಶಸ್ಸು ಕಂಡ ಪೊಲೀಸ್
ಇದರ ಬೆನ್ನಟ್ಟಿದ ಪೊಲೀಸರು ವಾರ್ಧಾ ಜಿಲ್ಲೆಯ ಪುಲ್ಗಾಂವ್ ಮತ್ತು ಚಂದ್ರಾಪುರ ಜಿಲ್ಲೆಯ ತದಲಿಯಿಂದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಡಿಪೋಗೆ ಹೊರಟ ಟ್ಯಾಂಕರ್ಗಳು ವಾರ್ಧಾ, ಚಂದ್ರಾಪುರ ಮತ್ತು ನಾಗ್ಪುರ್ ಜಿಲ್ಲೆಯ ಕೆಲ ಸ್ಥಳಗಳಲ್ಲಿ ನಿಂತಿರುವುದು ಕಂಡು ಬಂದಿದೆ.
ಅಲ್ಲಿ ಚಾಲಕರ ಸಹಾಯದಿಂದ ನೂರಾರು ಲೀಟರ್ ಪೆಟ್ರೋಲ್ ತೆಗೆದು, ಅಕ್ರಮವಾಗಿ ಮಾರಾಟ ಮಾಡುವ ಗ್ಯಾಂಗ್ಗಳಿಗೆ ನೀಡಲಾಗುತ್ತಿತ್ತು. 22 ಲೀಟರ್ ಕ್ಯಾನ್ ಪೆಟ್ರೋಲ್ಗೆ 1200 ರಿಂದ 1500 ರೂಗೆ ಮಾರಾಟ ಮಾಡಿದ್ದು, ಇದನ್ನ ಪಡೆದ ಗ್ಯಾಂಗ್ 1,700 ರಿಂದ 1,800 ರೂಗೆ ಮಾರಾಟ ಮಾಡುತ್ತಿತ್ತು. ಇದೇ ರೀತಿ, ಪೆಟ್ರೋಲ್ ಪಡೆದುಕೊಳ್ಳುತ್ತಿದ್ದ ಮೀನಾ, ಮನೆಯಲ್ಲಿ ಅದರ ಸಂಗ್ರಹ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡ್ತಿದ್ದಳು.