ನಾಗ್ಪುರ (ಮಹಾರಾಷ್ಟ್ರ) : ಮಹಿಳೆಯರು ಶಾರ್ಟ್ ಸ್ಕರ್ಟ್ ಧರಿಸಿ ಪ್ರಚೋದನಾತ್ಮಕವಾಗಿ ನೃತ್ಯ ಮಾಡುವುದು ಅಶ್ಲೀಲವಲ್ಲ ಎಂದು ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠ ಅಭಿಪ್ರಾಯಪಟ್ಟಿದೆ. ಈ ಸಂಬಂಧ ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನಾಗ್ಪುರ ಪೀಠದ ನ್ಯಾಯಮೂರ್ತಿಗಳಾದ ಜಸ್ಟೀಸ್ ವಾಲ್ಮೀಕಿ ಮೆಂಗಸ್ ಹಾಗೂ ಜಸ್ಟೀಸ್ ವಿನಯ್ ಜೋಶಿ ಅವರಿದ್ದ ಪೀಠ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ.
ಶಾರ್ಟ್ ಸ್ಕರ್ಟ್ ಧರಿಸಿ ನೃತ್ಯ ಮಾಡಿದ ಸಂಬಂಧ ತಮ್ಮ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಐವರು ಮಹಿಳೆಯರು ಬಾಂಬೆ ಹೈಕೋರ್ಟ್ ನಾಗ್ಪುರ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಶಾರ್ಟ್ ಸ್ಕರ್ಟ್ ಧರಿಸಿ ನೃತ್ಯ ಮಾಡುವುದು ಅಶ್ಲೀಲತೆಯ ವ್ಯಾಪ್ತಿಗೆ ಬರುವುದಿಲ್ಲ. ಮಹಿಳೆಯರು ಇಂತಹ ಬಟ್ಟೆಗಳನ್ನು ಧರಿಸುವುದು ಸಾಮಾನ್ಯವಾಗಿದೆ. ಇದನ್ನು ಅಶ್ಲೀಲ ಎಂದು ಕರೆಯಲು ಆಗುವುದಿಲ್ಲ ಎಂದು ಹೇಳಿದೆ.
ಅರ್ಜಿದಾರರ ಪರ ವಕೀಲ ಅಕ್ಷಯ್ ನಾಯ್ಕ್ ವಾದ ಮಂಡಿಸಿ, ಮಹಿಳೆಯರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 24ರ ಅಡಿ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯರ ನೃತ್ಯದಿಂದಾಗಿ ಬೇರೆಯವರಿಗೆ ಸಮಸ್ಯೆ ಉಂಟಾದ ಬಗ್ಗೆ ಉಲ್ಲೇಖವಿಲ್ಲ. ಹೀಗಾಗಿ ಮಹಿಳೆಯರ ನೃತ್ಯ ಅಶ್ಲೀಲ ಎಂದು ಹೇಳಲಾಗದು ಎಂದು ನ್ಯಾಯಾಲಯಕ್ಕೆ ವಿವರಿಸಿದರು. ಸರ್ಕಾರದ ಪರವಾಗಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್ ಡೊಯಿಫೋಡ್ ವಾದ ಮಂಡಿಸಿ, ಪೊಲೀಸರ ಪರವಾಗಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಲಾಗಿದೆ. ನೃತ್ಯದ ಬಗ್ಗೆ ಜನರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಹೇಳಿದರು.