ನವದೆಹಲಿ :ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಶನಿವಾರ ನಡೆದ ಭದ್ರತಾ ಪಡೆಯ ಕಾರ್ಯಾಚರಣೆಯಲ್ಲಿ ನಾಗರಿಕರ ಹತ್ಯೆಯ ಕುರಿತಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಲು ಮುಂದಾಗಿದೆ.
ಈ ಕುರಿತಂತೆ ಮಾನವ ಹಕ್ಕುಗಳ ಆಯೋಗವು ಕೇಂದ್ರ ರಕ್ಷಣಾ ಕಾರ್ಯದರ್ಶಿ, ಕೇಂದ್ರ ಗೃಹ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ ಮತ್ತು ನಾಗಾಲ್ಯಾಂಡ್ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ. ಆರು ವಾರಗಳಲ್ಲಿ ಈ ವಿಷಯದ ಬಗ್ಗೆ ವಿವರವಾದ ವರದಿಯನ್ನು ನೀಡಲು ಸೂಚನೆ ನೀಡಿದೆ.
ವಿಶೇಷ ತನಿಖಾ ತಂಡ (ಎಸ್‌ಐಟಿ) ಈಗಾಗಲೇ ಘಟನೆಯ ತನಿಖೆ ನಡೆಸುತ್ತಿದೆ. ಮೃತರ ಸಂಬಂಧಿಕರಿಗೆ ನೀಡಲಾದ ಪರಿಹಾರ, ಗಾಯಾಳುಗಳಿಗೆ ನೀಡುತ್ತಿರುವ ವೈದ್ಯಕೀಯ ಚಿಕಿತ್ಸೆಯ ಸ್ಥಿತಿಗತಿ ಮತ್ತು ಘಟನೆಯಲ್ಲಿ ದಾಖಲಾದ ಪ್ರಕರಣಗಳ ಒಟ್ಟು ವರದಿಯನ್ನು ನೀಡಬೇಕೆಂದು ಮಾನವ ಹಕ್ಕುಗಳ ಆಯೋಗ ಹೇಳಿದೆ.
AFSPA ಹಿಂಪಡೆಯಲು ಕೇಂದ್ರಕ್ಕೆ ಪತ್ರ
ನಾಗರಿಕರ ಹತ್ಯೆ ನಂತರ ನಾಗಾಲ್ಯಾಂಡ್ ಸಿಎಂ ನೆಫಿಯು ರಿಯೊ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ-1958 (AFSPA) ಕೂಡ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದೆ. ಕ್ರೂರ ಕಾಯ್ದೆಯಿಂದಾಗಿ ಜಾಗತಿಕವಾಗಿ ಭಾರತ ಸಾಕಷ್ಟು ಟೀಕೆಗಳನ್ನು ಎದುರಿಸಿದೆ ಎಂದಿದ್ದಾರೆ.
ದಾಳಿಯಲ್ಲಿ ಮೃತಪಟ್ಟ 14 ನಾಗರಿಕರ ಸಮಾಧಿಗಳಿಗೆ ಪುಷ್ಪಾರ್ಚನೆ ಮಾಡಿದ ನಂತರ AFSPA ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗಾಲ್ಯಾಂಡ್ ಕ್ಯಾಬಿನೆಟ್ AFSPA ಹಿಂಪಡೆಯಲು ಮಂಗಳವಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.
ನಾಗಾಲ್ಯಾಂಡ್‌ನಲ್ಲಿ ನಡೆದ ನಾಗರಿಕರ ಹತ್ಯೆಗಳ ನಂತರ ಸೇನೆಯ ವಿರುದ್ಧ ಮೇಘಾಲಯ ಸರ್ಕಾರದಿಂದಲೂ ಆಕ್ರೋಶ ವ್ಯಕ್ತವಾಗಿದೆ. ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯನ್ನು ಹಿಂಪಡೆಯಬೇಕೆಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಒತ್ತಾಯಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು AFSPA ಹಿಂಪಡೆಯಲೇಬೇಕೆಂದು ಆಗ್ರಹಿಸಿದ್ದಾರೆ.
ಏನಿದು AFSPA?
AFSPA ಕಾಯ್ದೆ ಭಾರತೀಯ ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ನೀಡಲು ಇರುವ ಕಾಯ್ದೆಯಾಗಿದೆ. ತೊಂದರೆಯಲ್ಲಿರುವ ಸ್ಥಳಗಳಲ್ಲಿ ಭಾರತೀಯ ಸೇನೆಯನ್ನು ನಿಯೋಜಿಸುವ ಮತ್ತು ಸೇನೆಗೆ ವಿಶೇಷ ಅಧಿಕಾರವನ್ನು ಕಲ್ಪಿಸುವ ಅವಕಾಶವನ್ನು ನೀಡುತ್ತದೆ. ತೊಂದರೆಗೆ ಒಳಗಾದ ಪ್ರದೇಶಗಳ ಕಾಯ್ದೆ-1976 ಅನ್ನು ಜಾರಿಗೊಳಿಸಲಾಗಿದೆ.
ಈ ಕಾಯ್ದೆಯಡಿಯುಲ್ಲಿ ಬರುವ ಪ್ರದೇಶಗಳಲ್ಲಿ ಕನಿಷ್ಠ ಮೂರು ತಿಂಗಳ ಕಾಲ ಸೇನೆಯನ್ನು ನಿಯೋಜಿಸಲಾಗುತ್ತದೆ. 1958ರಲ್ಲಿ ನಾಗಾಲ್ಯಾಂಡ್ ಮತ್ತು ಇತರ ರಾಜ್ಯಗಳಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಇಲ್ಲಿ ಸೇನೆಯನ್ನು ನಿಯೋಜನೆ ಮಾಡಲಾಗಿದೆ. ಇದೇ ಕಾಯ್ದೆಯ ವಿರುದ್ದ ಈಗ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ಭಾರತ ಉಸಿರುಗಟ್ಟಿಸುವಂತಿದ್ದರೆ, ದೇಶ ಬಿಟ್ಟು ಹೊರಡಿ: ಫಾರೂಕ್ ಅಬ್ದುಲ್ಲಾಗೆ ಆರ್ಎಸ್ಎಸ್ ಸಲಹೆ