ಇಂಪಾಲ್(ಮಣಿಪುರ): ತೀವ್ರ ಕುತೂಹಲ ಕೆರಳಿಸಿದ್ದ ಮಣಿಪುರ ಮುಖ್ಯಮಂತ್ರಿ ಆಯ್ಕೆ ವಿಚಾರಕ್ಕೆ ಕೊನೆಗೂ ಮುಕ್ತಿ ಸಿಕ್ಕಿದ್ದು, ಎರಡನೇ ಅವಧಿಗೆ ಎನ್.ಬಿರೇನ್ ಸಿಂಗ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಮುಕ್ತಾಯಗೊಂಡ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಹೆಚ್ಚಿನ ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಇಂದು ಬಿರೇನ್ ಸಿಂಗ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇವರ ಜೊತೆಗೆ ಶಾಸಕರಾದ ನೆಮ್ಚಾ ಕಿಪ್‌ಗೆನ್, ವೈ. ಖೇಮ್‌ಚಂದ್ ಸಿಂಗ್, ಬಿಸ್ವಜಿತ್ ಸಿಂಗ್, ಅವಾಂಗ್‌ಬೌ ನ್ಯೂಮೈ ಮತ್ತು ಗೋವಿಂದಾಸ್ ಕೊಂತೌಜಮ್ ಕ್ಯಾಬಿನೆಟ್ ದರ್ಜೆ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.
ಮಣಿಪುರ ನೂತನ ಸಿಎಂ ಆಗಿ ಬಿರೇನ್ ಸಿಂಗ್ ಪ್ರಮಾಣ ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿಸುವ ನಿರ್ಧಾರ: ಪ್ರಮಾಣ ವಚನ ಸ್ವೀಕಾರದ ಬಳಿಕ ಮಾತನಾಡಿರುವ ಬಿರೇನ್ ಸಿಂಗ್, ಮಣಿಪುರ ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿಸುವ ಘೋಷಣೆ ಮಾಡಿದ್ದು, ಅದಕ್ಕಾಗಿ ಎಲ್ಲ ರೀತಿಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಜೊತೆಗೆ ರಾಜ್ಯವನ್ನ ಡ್ರಗ್ಸ್ ಮುಕ್ತವನ್ನಾಗಿಸುವ ಇರಾದೆ ಇಟ್ಟುಕೊಂಡಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ:ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ; ಬಿಜೆಪಿ ಬೆಂಬಲ
ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಣಿಪುರ ಬಿಜೆಪಿ ಅಧ್ಯಕ್ಷೆ ಮಯಮ್ ಶಾರದಾ ದೇವಿ, ತ್ರಿಪುರಾ ಸಿಎಂ ಬಿಪ್ಲಬ್ ಕುಮಾರ್ ದೇವ್ ಸೇರಿದಂತೆ ಅನೇಕರು ಇದ್ದರು.
ಮಣಿಪುರದಲ್ಲಿ ಸರ್ಕಾರ ರಚನೆ ಮಾಡುವ ಉದ್ದೇಶದಿಂದ ಬಿಜೆಪಿಯ ಕೇಂದ್ರ ವೀಕ್ಷಕರಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಅವರನ್ನು ನೇಮಕ ಮಾಡಲಾಗಿತ್ತು. ಅಲ್ಲಿನ ಶಾಸಕರ ಒಮ್ಮತದ ಬಳಿಕ ಬಿರೇನ್ ಸಿಂಗ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು.
ಪ್ರಧಾನಿ ಮೋದಿ ಅಭಿನಂದನೆ:ಮಣಿಪುರ ನೂತನ ಸಿಎಂ ಬಿರೇನ್ ಸಿಂಗ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಬಿರೇನ್ ಸಿಂಗ್ ನೇತೃತ್ವದ ತಂಡ ಮಣಿಪುರದಲ್ಲಿ ಹೊಸ ಯುಗ ಆರಂಭಿಸಲಿದೆ ಎಂಬ ನಂಬಿಕೆ ನನಗಿದೆ. ಕಳೆದ ಐದು ವರ್ಷಗಳಲ್ಲಿ ಬಿರೇನ್ ಸಿಂಗ್ ಸರ್ಕಾರ ಉತ್ತಮ ಆಡಳಿತ ನೀಡಿರುವುದೇ ಇದಕ್ಕೆ ಸಾಕ್ಷಿ ಎಂದು ಶ್ಲಾಘಿಸಿದ್ದಾರೆ.