ಪೂಂಚ್ (ಜಮ್ಮು ಮತ್ತು ಕಾಶ್ಮೀರ):ಪೂಂಚ್ ಜಿಲ್ಲೆಯ ಸುರನ್‌ಕೋಟೆ ಪ್ರದೇಶದ ಸಶಸ್ತ್ರ ಪೊಲೀಸ್ ಶಿಬಿರದ ಆವರಣದಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ. ಆದರೆ, ಯಾವುದೇ ನಷ್ಟ, ಪ್ರಾಣ ಹಾನಿ ಕುರಿತಂತೆ ತಕ್ಷಣಕ್ಕೆ ವರದಿಯಾಗಿಲ್ಲ. ಡಿಸೆಂಬರ್ 19 ಮತ್ತು 20 ರ ಮಧ್ಯರಾತ್ರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಶಸ್ತ್ರ ಪೊಲೀಸ್ 6ನೇ ಬೆಟಾಲಿಯನ್ ‘ಡಿ ಕಾಯ್’ ಶಿಬಿರದಲ್ಲಿ ನಿಲ್ಲಿಸಲಾಗಿದ್ದ ಕೆಲವು ವಾಹನಗಳ ಕಿಟಕಿ ಗಾಜುಗಳು ಹಾನಿಗೊಳಗಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
"ಕಳೆದ ರಾತ್ರಿ ಸುರನ್‌ಕೋಟೆಯ ಜೆಕೆ ಪೊಲೀಸ್‌ನ ಸಶಸ್ತ್ರ ಬೆಟಾಲಿಯನ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಕಡಿಮೆ ತೀವ್ರತೆಯ ನಿಗೂಢ ಬ್ಲಾಸ್ಟ್ ಸಂಭವಿಸಿದ ಬಗ್ಗೆ ವರದಿಯಾಗಿದೆ. ಇದರಿಂದಾಗಿ ಕೆಲವು ನಿಲುಗಡೆ ಮಾಡಿದ ವಾಹನಗಳ ಕಿಟಕಿ ಗಾಜುಗಳಿಗೆ ಹಾನಿ ಉಂಟಾಗಿದೆ. ನಿಗೂಢ ಸ್ಫೋಟದ ಕುರಿತು ತನಿಖೆ ಚುರುಕುಗೊಳಿಸಲಾಗಿದೆ'' ಜಮ್ಮು ವಲಯದ ಐಜಿಪಿ ಕಚೇರಿ ತಿಳಿಸಿದೆ. ಘಟನೆ ಕುರಿತಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಇತ್ತೀಚಿನ ಪ್ರಕರಣ, ಕಾರ್ಗಿಲ್ನಲ್ಲಿ ನಿಗೂಢ ಸ್ಫೋಟ:ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದರು ಹಾಗೂ ಎಂಟು ಮಂದಿ ಗಾಯಗೊಂಡಿದ್ದ ಘಟನೆ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನ ಕಾರ್ಗಿಲ್ ಜಿಲ್ಲೆಯಲ್ಲಿ ಇತ್ತೀಚೆಗೆ ಜರುಗಿತ್ತು. ನಿಗೂಢ ಸ್ಫೋಟದಲ್ಲಿ ಒಬ್ಬ ಮಹಿಳೆ ಸೇರಿದಂತೆ ಮೂವರು ಮೃತಪಟ್ಟಿದ್ದರು.