ರಾಜೌರಿ(ಜಮ್ಮು ಮತ್ತು ಕಾಶ್ಮೀರ): ರಾಜೌರಿಯ ಅಪ್ಪರ್ ಡ್ಯಾಂಗ್ರಿ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದ್ದು, ಮಗುವೊಂದು ಸಾವನ್ನಪ್ಪಿದೆ. ಇದೇ ವೇಳೆ, ಐವರು ಗಾಯಗೊಂಡಿದ್ದು ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇದೇ ವೇಳೆ ಶಂಕಿತ ಸುಧಾರಿತ ಸ್ಫೋಟಕ ಪತ್ತೆಯಾಗಿದ್ದು, ತೆರವುಗೊಳಿಸಲಾಗಿದೆ ಎಂದು ಎಡಿಜಿಪಿ ಮುಖೇಶ್ ಸಿಂಗ್ ತಿಳಿಸಿದ್ದಾರೆ. ನಿನ್ನೆಯಷ್ಟೇ ಇದೇ ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿದ್ದು, ನಾಲ್ವರು ಸಾವನ್ನಪ್ಪಿದ್ದರು.
ಘಟನೆಯ ವಿವರ:ನಿನ್ನೆ ಸಂಜೆ ಡ್ಯಾಂಗ್ರಿ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳು ಮೂರು ವಸತಿ ಗೃಹಗಳಿಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದರು. 13 ಜನ ಗಾಯಗೊಂಡಿದ್ದರು. ಅವರಲ್ಲಿ ಮೂವರು ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಸೇನಾ ಸಮವಸ್ತ್ರ ಧರಿಸಿದ್ದ ಇಬ್ಬರು ಅಲ್ಲಿನ ನಿವಾಸಿಗಳ ಮೇಲೆ ಮನಸೋಇಚ್ಛೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ನ್ಯಾಯಕ್ಕಾಗಿ ಪ್ರತಿಭಟನೆ: ಹತ್ಯೆಗೊಳಗಾದ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವಂತೆ ನಿನ್ನೆ ರಾತ್ರಿ ಸ್ಥಳೀಯರು ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಡ್ಯಾಂಗ್ರಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಡ್ಯಾಂಗ್ರಿಯಲ್ಲಿರುವ ಮುಖ್ಯ ಚೌಕ್ನಲ್ಲಿ ನೂರಾರು ಗ್ರಾಮಸ್ಥರು ಜಮಾಯಿಸಿ ನಿವಾಸಿಗಳಿಗೆ ಭದ್ರತೆ ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು. ಅಲ್ಲದೇ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸ್ಥಳಕ್ಕೆ ಭೇಟಿ ನೀಡಬೇಕೆಂದು ಒತ್ತಾಯಿಸಿದ್ದರು. ಜಿಲ್ಲಾಡಳಿತ ನಮಗೆ ಯಾವುದೇ ಭದ್ರತೆ ನೀಡುತ್ತಿಲ್ಲ. ಮನೋಜ್ ಸಿನ್ಹಾ ಇಲ್ಲಿಗೆ ಬಂದು ನಮ್ಮ ಬೇಡಿಕೆಗಳನ್ನು ಆಲಿಸಲಿ ಎಂದು ಪ್ರತಿಭಟನಾನಿರತರೊಬ್ಬರು ಹೇಳಿದ್ದರು.