ನವದೆಹಲಿ :ನೆರೆಯ ರಾಷ್ಟ್ರ ಮ್ಯಾನ್ಮಾರ್ನಲ್ಲಿರುವ ಭಾರತ ವಿರೋಧಿ ಸಂಘಟನೆಗಳ ವಿರುದ್ಧ ಅಲ್ಲಿನ ಸೇನೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ. ಇದು ಭಾರತ ಮತ್ತು ಮ್ಯಾನ್ಮಾರ್ ಸಂಬಂಧಕ್ಕೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖ ಬೆಳವಣಿಗೆಯಾಗಿದೆ.
ಈ ಹಿಂದೆ ಅಸ್ಸಾಂ ರೈಫಲ್ಸ್ ಪಡೆಯ ಕರ್ನಲ್ ಮತ್ತು ಅವರ ಕುಟುಂಬದ ಹತ್ಯೆಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕ ಸಂಘಟನೆಯಾದ ಪೀಪಲ್ಸ್ ಲಿಬರೇಶನ್ ಆರ್ಮಿಯಂತಹ ಗುಂಪುಗಳ ವಿರುದ್ಧ ಮ್ಯಾನ್ಮಾರ್ ಸೇನೆ ಕಾರ್ಯಾಚರಣೆ ನಡೆಸುತ್ತಿದೆ. ಮ್ಯಾನ್ಮಾರ್ ಸೇನೆಯೊಡನೆ ಭಾರತೀಯ ಏಜೆನ್ಸಿಗಳು ಸಂಪರ್ಕದಲ್ಲಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಭಾರತೀಯ ಸೇನೆಯು ಮ್ಯಾನ್ಮಾರ್ನಲ್ಲಿರುವ ಮಿಲಿಟರಿ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ. ಇತ್ತೀಚೆಗೆ ಭಾರತ ವಿರೋಧಿ ಸಂಘಟನೆಯ ಐವರು ಬಂಡುಕೋರರನ್ನು ಮ್ಯಾನ್ಮಾರ್ ಭಾರತಕ್ಕೆ ಹಸ್ತಾಂತರ ಮಾಡಿತ್ತು ಎಂದು ಮೂಲಗಳು ತಿಳಿಸಿವೆ.