ನವದೆಹಲಿ: ಕೇಂದ್ರದ ಮಾಜಿ ಸಚಿವೆ, ಮಾಜಿ ರಾಜ್ಯಪಾಲೆ ಹಾಗೂ ಪ್ರಸ್ತುತ ಪ್ರತಿಪಕ್ಷಗಳ ಒಕ್ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ವಿಚಿತ್ರ ಪರಿಸ್ಥಿತಿಯೊಂದನ್ನು ಎದುರಿಸುತ್ತಿದ್ದಾರೆ. ತನ್ನ ಫೋನಿಗೆ ಹೊರಗಿನಿಂದ ಕರೆಗಳು ಬರುತ್ತಿಲ್ಲ, ಹೊರಗಿನಿಂದ ಕರೆ ಮಾಡುವಾಗ ಕಾಲ್ ಡೈವರ್ಟ್ ಆಗುತ್ತಿವೆ ಮತ್ತು ನಾನು ಯಾರಿಗಾದರೂ ಕರೆ ಮಾಡಲು ಯತ್ನಿಸಿದಾಗ ಕರೆಗಳು ಸರಿಯಾಗಿ ಕನೆಕ್ಟ್ ಆಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಕಳೆದ ರಾತ್ರಿ 9 ಗಂಟೆಗೆ ಟ್ವಿಟರ್ನಲ್ಲಿ ದೂರು ಹಂಚಿಕೊಂಡಿದ್ದು, "ಇಂದು ಕೆಲ ಬಿಜೆಪಿ ಮಿತ್ರರೊಂದಿಗೆ ಮಾತನಾಡಿದ ನಂತರ ನನ್ನ ಮೊಬೈಲಿಗೆ ಒಳಬರುವ ಎಲ್ಲ ಕರೆಗಳು ಡೈವರ್ಟ್ ಆಗಿವೆ ಮತ್ತು ನನಗೆ ಕರೆ ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ನೀವು ನನ್ನ ಫೋನನ್ನು ಮೊದಲಿನ ಸ್ಥಿತಿಗೆ ತಂದಲ್ಲಿ, ಭಾರತೀಯ ಜನತಾ ಪಕ್ಷ, ತೃಣಮೂಲ ಕಾಂಗ್ರೆಸ್ ಅಥವಾ ಬಿಜು ಜನತಾ ದಳದ ಯಾವುದೇ ಸಂಸದರಿಗೆ ಇಂದು ರಾತ್ರಿ ಕರೆ ನಾನು ಕರೆ ಮಾಡಲ್ಲ ಎಂದು ಪ್ರಾಮಿಸ್ ಮಾಡುತ್ತೇನೆ." ಎಂದು ಹೇಳಿದ್ದಾರೆ.
ಮಹಾನಗರ್ ಟೆಲಿಪೋನ್ ನಿಗಮ ಲಿಮಿಟೆಡ್ ನೊಂದಿಗೆ ತಾವು ನಡೆಸಿರುವ ಚರ್ಚೆಯ ಬಗ್ಗೆ ಅವರು ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ. ಅದರ ಪ್ರಕಾರ, ಅವರ ಎಂಟಿಎನ್ಎಲ್ ಕೆವೈಸಿಯನ್ನು ಅಮಾನತು ಮಾಡಲಾಗಿದೆ ಮತ್ತು ಸಿಮ್ ಅನ್ನು ಮುಂದಿನ 24 ಗಂಟೆಗಳೊಳಗೆ ಬ್ಲಾಕ್ ಮಾಡಲಾಗುವುದು ಎಂದು ಎಂಟಿಎನ್ಎಲ್ ಹೇಳಿದೆ.