ಗಾಲ್ಸಿ(ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಕಣ ಜೋರಾಗಿದ್ದು, ಬಿಜೆಪಿ - ತೃಣಮೂಲ ಕಾಂಗ್ರೆಸ್ ನಡುವಿನ ಆರೋಪ - ಪ್ರತ್ಯಾರೂಪ ಜೋರಾಗಿವೆ. ಇದೀಗ ಮಮತಾ ಬ್ಯಾನರ್ಜಿ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ನನ್ನ ದೂರವಾಣಿ ಕರೆ ಕದ್ದಾಲಿಕೆ ಮಾಡಲಾಗುತ್ತಿದೆ ಎಂದಿರುವ ಅವರು, ಸಿಐಡಿ ತನಿಖೆಗೆ ಆದೇಶಿಸುವುದಾಗಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶವಗಳನ್ನ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿರುವ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಇದೀಗ ತಮ್ಮ ಮೊಬೈಲ್ ಕದ್ದಾಲಿಕೆ ಆಗಿದೆ ಎಂದು ಆರೋಪಿಸಿದ್ದಾರೆ.
ಏನಿದು ಪ್ರಕರಣ?:ಏಪ್ರಿಲ್ 10ರಂದು ನಡೆದಿದ್ದ 4ನೇ ಹಂತದ ಚುನಾವಣೆ ವೇಳೆ ಕೂಚ್ ಬಿಹಾರ್ದಲ್ಲಿ ಭದ್ರತಾ ಸಿಬ್ಬಂದಿ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಅವರ ಮೃತದೇಹವನ್ನಿಟ್ಟುಕೊಂಡು ಚುನಾವಣಾ ಜಾಥಾ ನಡೆಸುವಂತೆ ಸಿತಾಲ್ಕುಚಿ ಟಿಎಂಸಿ ಅಭ್ಯರ್ಥಿಗೆ ಮಮತಾ ಸೂಚನೆ ನೀಡಿದ್ದರು ಎನ್ನುವ ಆಡಿಯೋ ಕ್ಲೀಪ್ ಬಹಿರಂಗಗೊಂಡಿದೆ. ಇದನ್ನ ಬಿಜೆಪಿ ರಿಲೀಸ್ ಮಾಡಿದ್ದು, ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.