ನವದೆಹಲಿ:ಭಾರತೀಯ ಕುಸ್ತಿ ಒಕ್ಕೂಟದ ವಿವಾದವು ಹೊಸ ತಿರುವು ಪಡೆದಿದೆ. ಪ್ರತಿಷ್ಠಿತ ಪ್ರಶಸ್ತಿಗಳ ವಿಜೇತರು ಹಾಗೂ ಹಿರಿಯ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ವಿರುದ್ಧ ಕಿರಿಯ ಕುಸ್ತಿಪಟುಗಳು ತಿರುಗಿ ಬಿದ್ದಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಮೂವರ ವಿರುದ್ಧವೂ ಕಿರಿಯ ಕುಸ್ತಿಪಟುಗಳ ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ, ತಮ್ಮ ತಾಯಿಗೆ ಬೆದರಿಕೆ ಫೋನ್ ಕರೆಗಳು ಬರುತ್ತಿವೆ ಎಂದ ಸಾಕ್ಷಿ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ.
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಸಂಬಂಧ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಸೇರಿ ಇಡೀ ಒಕ್ಕೂಟದ ವಿರುದ್ಧ ಬಜರಂಗ್, ಸಾಕ್ಷಿ, ವಿನೇಶ್ ಸಮರ ಸಾರಿದ್ದಾರೆ. ಈ ಕುರಿತು ಕಾನೂನು ಹೋರಾಟವನ್ನೂ ನಡೆಸುತ್ತಿರುವ ಹಿರಿಯ ಕುಸ್ತಿಪಟುಗಳು ತಮ್ಮ ಪ್ರಶಸ್ತಿಗಳನ್ನು ವಾಪಸ್ ಮಾಡಿದ್ದಾರೆ. ಈಗಾಗಲೇ ಸಾಕ್ಷಿ ಮಲಿಕ್ ಕುಸ್ತಿಯನ್ನೇ ತೊರೆದಿದ್ದಾರೆ. ಮತ್ತೊಂದೆಡೆ, ಬಜರಂಗ್ ಪುನಿಯಾ ತಮ್ಮ ಪದ್ಮಶ್ರೀ ಪ್ರಶಸ್ತಿ ಹಿಂತಿರುಗಿಸುವುದಾಗಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರೆ, ವಿನೇಶ್ ಫೋಗಟ್ ತಮ್ಮ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ವಾಪಸ್ ಮಾಡಿದ್ದು, ಅವುಗಳನ್ನು ಇತ್ತೀಚಿಗೆ ದೆಹಲಿಯ ಕರ್ತವ್ಯ ಪಥದಲ್ಲಿ ಇಟ್ಟು ಬಂದಿದ್ದರು.
ಹಿರಿಯರ ವಿರುದ್ಧ ಕಿರಿಯರು ಅಖಾಡಕ್ಕೆ: ಇದರ ನಡುವೆ ಅಗ್ರ ಕುಸ್ತಿಪಟುಗಳ ವಿರುದ್ಧ ಕಿರಿಯ ಕುಸ್ತಿಪಟುಗಳು ಹೋರಾಟಕ್ಕೆ ಇಳಿದಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ನೂರಾರು ಜೂನಿಯರ್ ಕುಸ್ತಿಪಟುಗಳು ಬುಧವಾರ ಸಮಾವೇಶಗೊಂಡು ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ವೃತ್ತಿಜೀವನದ ಒಂದು ವರ್ಷವು ನಷ್ಟವಾಗಿದೆ. ಇದಕ್ಕೆ ಈ ಮೂವರು ಹಿರಿಯ ಕುಸ್ತಿಪಟುಗಳೇ ಕಾರಣ ಎಂದು ಆರೋಪಿಸಿದ್ದಾರೆ.
ಬಾಗ್‌ಪತ್‌ನ ಛಪ್ರೌಲಿಯಲ್ಲಿರುವ ಆರ್ಯ ಸಮಾಜ ಅಖಾರಾ, ನರೇಲಾದ ವೀರೇಂದ್ರ ಕುಸ್ತಿ ಅಕಾಡೆಮಿ ಸೇರಿ ವಿವಿಧ ಭಾಗಗಳಿಂದ ಬಸ್‌ಗಳಲ್ಲಿ ಬಂದಿದ್ದ ಸುಮಾರು 300 ಮಂದಿ ಕಿರಿಯ ಕುಸ್ತಿಪಟುಗಳು ಭಿತ್ತಿಚಿತ್ರಗಳನ್ನು ಹಿಡಿದು ಪುನಿಯಾ, ಮಲಿಕ್ ಮತ್ತು ಫೋಗಟ್ ವಿರುದ್ಧ ಘೋಷಣೆಗಳನ್ನು ಕೂಗಿದರು. 'ಯುಡಬ್ಲ್ಯುಡಬ್ಲ್ಯು ಈ 3 ಕುಸ್ತಿಪಟುಗಳಿಂದ ನಮ್ಮ ಕುಸ್ತಿಯನ್ನು ಉಳಿಸಿ' ಎಂಬ ಬ್ಯಾನರ್‌ಗಳನ್ನು ಪ್ರದರ್ಶಿಸಿದರು.