ಸತ್ನಾ(ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಚಲಾವಣೆಯಾಗುವ ಪ್ರತಿಯೊಂದು ಮತವೂ ಕೂಡ 'ತ್ರಿಶಕ್ತಿ'ಗಳಿಗೆ ಬಲ ನೀಡಲಿದೆ. ಒಂದನೆಯದು, ಮಧ್ಯಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚಿಸಲಿದೆ. ಎರಡನೆಯದು, ಕೇಂದ್ರದಲ್ಲಿ ಪ್ರಧಾನಿಗೆ ಬಲ ತುಂಬಲಿದೆ. ಮೂರನೆಯದು, ರಾಜ್ಯದಲ್ಲಿ 'ಭ್ರಷ್ಟ' ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರ ಉಳಿಸಲಿದೆ. ಇದರರ್ಥ ಒಂದು ಮತ, ಮೂರು ಅದ್ಭುತಗಳು. ಇದೊಂದು ರೀತಿ 'ತ್ರಿಶಕ್ತಿ' ಎಂದು ಪ್ರಧಾನಿ ನರೇಂದ್ರ ಮೋದಿ ಮತ ಪ್ರಚಾರ ಸಭೆ ಉದ್ದೇಶಿಸಿ ಹೇಳಿದ್ದಾರೆ.
ಪಂಚರಾಜ್ಯ ಚುನಾವಣೆಗಳ ಪೈಕಿ ಮಧ್ಯಪ್ರದೇಶದಲ್ಲಿ ನವೆಂಬರ್ 17ರಂದು ಮತದಾನ ನಡೆಯಲಿದೆ. ಇಂದು ಸತ್ನಾದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ''ನಮ್ಮ ಸರ್ಕಾರ ಬಡವರಿಗಾಗಿ ನಾಲ್ಕು ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಿದೆ. ಸತ್ನಾದಲ್ಲಿ ಬಡವರಿಗೆ 1.32 ಲಕ್ಷ ಮನೆಗಳು ದೊರೆತಿವೆ. ಆದರೆ, ನನಗಾಗಿ ಒಂದು ಮನೆಯನ್ನೂ ಮಾಡಿಕೊಳ್ಳಲಿಲ್ಲ'' ಎಂದರು.
ಇದನ್ನೂ ಓದಿ:ಹೈಕಮಾಂಡ್ ಸೂಚನೆಯಂತೆ ಚುನಾವಣಾ ರಾಜಕೀಯದಿಂದ ಸದಾನಂದಗೌಡ ನಿವೃತ್ತಿ: ಬಿ ಎಸ್ ಯಡಿಯೂರಪ್ಪ
''ದೇಶದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಕಲಿ ಫಲಾನುಭವಿಗಳಿಗೆ ಕಡಿವಾಣ ಹಾಕಲಾಗಿದೆ. ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿದ್ದ ಕಾಂಗ್ರೆಸ್ ಸೃಷ್ಟಿಸಿದ್ದ 10 ಕೋಟಿ ನಕಲಿ ಫಲಾನುಭವಿಗಳನ್ನು ದಾಖಲೆಗಳಿಂದ ತೆಗೆದುಹಾಕಲಾಗಿದೆ. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು ನನ್ನನ್ನು ನಿಂದಿಸುತ್ತಿದ್ದಾರೆ. ಏಕೆಂದರೆ, ನಮ್ಮ ಸರ್ಕಾರದ ಈ ಕ್ರಮದಿಂದ ಕಾಂಗ್ರೆಸ್‌ನವರಿಗೆ ಬಲವಾದ ಹೊಡೆತ ಬಿದ್ದಿದೆ. ಸರ್ಕಾರವು ಜನರ 2.75 ಲಕ್ಷ ಕೋಟಿ ಉಳಿತಾಯ ಮಾಡಿದೆ'' ಎಂದು ಮಾಹಿತಿ ನೀಡಿದರು.