ಕರ್ನಾಟಕ

karnataka

ETV Bharat / bharat

ತೆಲಂಗಾಣಕ್ಕೆ ನನ್ನ ಆಯ್ಕೆ ರೇವಂತ್​ ರೆಡ್ಡಿ: ರಾಹುಲ್​ ಗಾಂಧಿ - ತೆಲಂಗಾಣ

Rahul Gandhi picks Revanth Reddy as Telangana Chief Minister: ತೆಲಂಗಾಣದಲ್ಲಿ ಸರ್ಕಾರ ರಚನೆ ಹಾಗೂ ನೂತನ ಮುಖ್ಯಮಂತ್ರಿ ಆಯ್ಕೆ ಸಂಬಂಧ ಇಂದು ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ ನಡೆಯಿತು.

My choice is Revanth Reddy, Rahul Gandhi tells AICC meeting to pick Telangana Chief Minister
ತೆಲಂಗಾಣ: 'ನನ್ನ ಆಯ್ಕೆ ರೇವಂತ್​ ರೆಡ್ಡಿ' - ರಾಹುಲ್​; ಸಂಜೆ ​ಸಿಎಲ್‌ಪಿ ನಾಯಕನ ಬಗ್ಗೆ ಡಿಕೆಶಿ ಘೋಷಣೆ ಸಾಧ್ಯತೆ

By ETV Bharat Karnataka Team

Published : Dec 5, 2023, 5:03 PM IST

ನವದೆಹಲಿ/ಹೈದರಾಬಾದ್​: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ 64 ಸ್ಥಾನಗಳನ್ನು ಗೆದ್ದು ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್​ ಸಮಿತಿ (ಟಿಪಿಸಿಸಿ) ಅಧ್ಯಕ್ಷ ರೇವಂತ್​ ರೆಡ್ಡಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ಪಕ್ಷದ ನಾಯಕ ರಾಹುಲ್​ ಗಾಂಧಿ ಒಲವು ವ್ಯಕ್ತಪಡಿಸಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

119 ಸದಸ್ಯ ಬಲದ ವಿಧಾನಸಭೆಯ ಚುನಾವಣಾ ಫಲಿತಾಂಶದಲ್ಲಿ ಆಡಳಿತಾರೂಢ ಬಿಆರ್​ಎಸ್​ 39 ಸ್ಥಾನಗಳಿಗೆ ಕುಸಿದಿದ್ದು, ಕಾಂಗ್ರೆಸ್​ ಸರ್ಕಾರ ರಚನೆಗೆ ಬೇಕಾದ ಬಹುಮತ ಸಾಧಿಸಿದೆ. ಇದರ ಬೆನ್ನಲ್ಲೇ ಕೈ ಪಾಳಯ ಸರ್ಕಾರ ರಚನೆ ಹಾಗೂ ಮುಖ್ಯಮಂತ್ರಿ ಆಯ್ಕೆ ಕಸರತ್ತು ಶುರು ಮಾಡಿದೆ. ಹೈದರಾಬಾದ್​​ನಲ್ಲಿ ಸೋಮವಾರ ಚುನಾಯಿತ ಶಾಸಕರ ಅಭಿಪ್ರಾಯಗಳನ್ನು ಪಕ್ಷದ ವರಿಷ್ಠರು ಸಂಗ್ರಹಿಸಿದ್ದಾರೆ. ಇಲ್ಲಿ ವ್ಯಕ್ತವಾದ ಸರ್ವಾನುಮತದ ನಿರ್ಣಯದೊಂದಿಗೆ ಶಾಸಕರು, ಕಾಂಗ್ರೆಸ್​ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಹೈಕಮಾಂಡ್​ಗೆ ವಹಿಸಿದ್ದಾರೆ.

ಅಂತೆಯೇ, ಇಂದು ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿ ನಿವಾಸದಲ್ಲಿ ಸರ್ಕಾರ ರಚನೆ ಕುರಿತು ಸಭೆ ನಡೆಯಿತು. ರಾಹುಲ್​ ಗಾಂಧಿ, ವೇಣುಗೋಪಾಲ್, ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದರು. ತೆಲಂಗಾಣ ಉಸ್ತುವಾರಿ ಮಾಣಿಕ್​ ರಾವ್​ ಠಾಕ್ರೆ ಅವರು ಶಾಸಕರ ಅಭಿಪ್ರಾಯದ ವರದಿಯನ್ನು ಸಭೆಯಲ್ಲಿ ಮಂಡಿಸಿದರು.

ರೇವಂತ್​ ರೆಡ್ಡಿ ನನ್ನ ಆಯ್ಕೆ-ರಾಹುಲ್ ಗಾಂಧಿ: ಈ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್​ ಗಾಂಧಿ, ''ನನ್ನ ಆಯ್ಕೆ ರೇವಂತ್​ ರೆಡ್ಡಿ. ಅವರು ಮುಖ್ಯಮಂತ್ರಿ ಆಗಬೇಕು'' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾಗಿ ಪಕ್ಷದ ಮೂಲಗಳು ತಿಳಿಸಿವೆ. ಡಿ.ಕೆ.ಶಿವಕುಮಾರ್​ ಜೊತೆಗೂ ರಾಹುಲ್​ ಮಾತುಕತೆ ನಡೆಸಿ, ಮಾಹಿತಿ ಪಡೆದರು. ಡಿಕೆಶಿ ತೆಲಂಗಾಣಕ್ಕೆ ಪಕ್ಷದ ವೀಕ್ಷಕರಾಗಿ ನೇಮಕವಾಗಿದ್ದು, ಇಂದು ಹೈದರಾಬಾದ್​ಗೆ ಮರಳಲಿದ್ದಾರೆ. ಈ ವೇಳೆ, ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸಭೆಯಲ್ಲಿ ಸಿಎಂ ಅಭ್ಯರ್ಥಿಯ ಹೆಸರು ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ.

ಹಲವು ಹುದ್ದೆಗಳ ನೇಮಕದ ಬಗ್ಗೆಯೂ ಚರ್ಚೆ: ಕಾಂಗ್ರೆಸ್ ಹೈಕಮಾಂಡ್​ ಮಟ್ಟದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಪಿಸಿಸಿ ಅಧ್ಯಕ್ಷ, ಸ್ಪೀಕರ್, ಉಪ ಸಭಾಪತಿ ಮತ್ತು ಇತರ ಹುದ್ದೆಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಮತ್ತೊಂದೆಡೆ, ಪಕ್ಷದ ಹಿರಿಯ ನಾಯಕರೊಬ್ಬರು ತಮಗೆ ಉಪ ಮುಖ್ಯಮಂತ್ರಿ ಜೊತೆಗೆ ಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ಅದು ಸಾಧ್ಯವಿಲ್ಲ ಎಂದು ಹೈಕಮಾಂಡ್ ಸ್ಪಷ್ಟಪಡಿಸಿದೆ. ಆದ್ದರಿಂದ ಈ ವಿಚಾರವಾಗಿ ಸಿಎಲ್‌ಪಿ ನಾಯಕನ ಆಯ್ಕೆ ಸಮಯದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಎಐಸಿಸಿ ಸೂಚಿಸಿದೆ ನೀಡಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಇಂಡಿಯಾ ಮೈತ್ರಿಕೂಟದ ಸಭೆಗೆ ಮಮತಾ, ನಿತೀಶ್​ಕುಮಾರ್​ ಗೈರು?: ಕಾಂಗ್ರೆಸ್​ ವಿರುದ್ಧ ವಿಪಕ್ಷಗಳ ಅಸಮಾಧಾನ

ABOUT THE AUTHOR

...view details