ಮುಜಾಫರ್ಪುರ (ಬಿಹಾರ): ಮುಜಾಫರ್ಪುರ ಜಿಲ್ಲೆಯ ಬಾಗಮತಿ ನದಿಯಲ್ಲಿ 30ಕ್ಕೂ ಹೆಚ್ಚು ಮಕ್ಕಳನ್ನು ಹೊತ್ತು ಸಾಗುತ್ತಿದ್ದ ದೋಣಿ ಮುಳುಗಿ ನಾಪತ್ತೆಯಾಗಿದ್ದ 12 ಮಕ್ಕಳ ಮೃತದೇಹಗಳನ್ನು ಶುಕ್ರವಾರ ನದಿಯಿಂದ ಹೊರತೆಗೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮುಜಾಫರ್ಪುರ ನಗರದ ಬೆನೀವಾದ ವ್ಯಾಪ್ತಿಯ ಮಧುರಪಟ್ಟಿ ಘಾಟ್ನಲ್ಲಿ ತುಂಬಿ ಹರಿಯುತ್ತಿದ್ದ ಬಾಗಮತಿ ನದಿಯಲ್ಲಿ ದೋಣಿ ಮುಳುಗಡೆಯಾಗಿತ್ತು. ದೋಣಿಯಲ್ಲಿ 30ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಅದರಲ್ಲಿ 20 ಮಕ್ಕಳನ್ನು ಗುರುವಾರವೇ ರಕ್ಷಣೆ ಮಾಡಲಾಗಿತ್ತು.
12 ಮಕ್ಕಳು ನಾಪತ್ತೆಯಾಗಿದ್ದು, ಅವರಿಗಾಗಿ ನಿನ್ನೆಯಿಂದಲೇ ಶೋಧ ಕಾರ್ಯ ಮುಂದುವರೆಸಲಾಗಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್)ಗಳ ತುರ್ತು ರಕ್ಷಣಾ ಸಿಬ್ಬಂದಿ ಮಕ್ಕಳು ನಾಪತ್ತೆಯಾದ ಕ್ಷಣದಿಂದಲೇ ನಿರಂತರವಾಗಿ ರಕ್ಷಣಾ ಕಾರ್ಯ ನಡೆಸಿದ್ದರು. ಇಂದು ಬೆಳಗ್ಗೆ 7 ಗಂಟೆಯಿಂದಲೇ ರಕ್ಷಣಾ ಕಾರ್ಯ ಪ್ರಾರಂಭಿಸಲಾಗಿತ್ತು. ಈ ವೇಳೆ ಉಳಿದ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.