ಮುಜಾಫರ್‌ನಗರ(ಉತ್ತರಪ್ರದೇಶ):ಜಿಲ್ಲೆಯ ಮನ್ಸೂರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಭೋಪಾಡ ರಸ್ತೆಯ ಇವಾನ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆಸಿದ ಶಸ್ತ್ರ ಚಿಕಿತ್ಸೆಯಲ್ಲಿ ರೋಗಿಯ ಹೊಟ್ಟೆಯಿಂದ ಬರೋಬ್ಬರಿ 63 ಸ್ಟೀಲ್ ಸ್ಪೂನ್‌ಗಳನ್ನು ತೆಗೆಯಲಾಗಿದೆ. ಆದ್ರೆ ರೋಗಿಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂಬುದು ವೈದ್ಯರ ಹೇಳಿಕೆಯಾಗಿದೆ.
ಮಾಹಿತಿ ಪ್ರಕಾರ, ಮನ್ಸೂರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೋಪಾಡ ಗ್ರಾಮದ ನಿವಾಸಿ ವಿಜಯ್ ಮಾದಕ ವ್ಯಸನಿಯಾಗಿದ್ದಾರೆ. ಇದರಿಂದ ವಿಜಯ್ ಕುಟುಂಬಸ್ಥರು ಅವರನ್ನು ಮಾದಕ ವ್ಯಸನ ನಿವಾರಣಾ ಕೇಂದ್ರಕ್ಕೆ ದಾಖಲಿಸಿದ್ದರು. ಶಾಮ್ಲಿಯಲ್ಲಿರುವ ಮಾದಕ ವ್ಯಸನ ನಿಗ್ರಹ ಕೇಂದ್ರದಲ್ಲಿ ವಿಜಯ್ ಸುಮಾರು ಒಂದು ತಿಂಗಳ ಕಾಲ ಇದ್ದರು ಎಂದು ಹೇಳಲಾಗುತ್ತಿದೆ. ಇಲ್ಲಿ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಕುಟುಂಬದವರು ಅವರನ್ನು ಮುಜಾಫರ್‌ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಇಲ್ಲಿ ತಪಾಸಣೆ ನಡೆಸಿದ ವೈದ್ಯರಿಗೆ ಶಾಕ್ ಆಗಿತ್ತು. ಬಳಿಕ ಶಸ್ತ್ರಚಿಕಿತ್ಸೆ ನಡೆಸಿ ವಿಜಯ್ ಹೊಟ್ಟೆಯಲ್ಲಿದ್ದ 63 ಸ್ಟೀಲ್ ಸ್ಪೂನ್‌ಗಳನ್ನು ಹೊರ ತೆಗೆದರು. ಇದನ್ನು ನೋಡಿದ ವೈದ್ಯರೂ ಆಶ್ಚರ್ಯಚಕಿತರಾದರು. ಆದರೆ, ಆಪರೇಷನ್ ನಂತರವೂ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.