ಶ್ರೀನಗರ( ಜಮ್ಮು -ಕಾಶ್ಮೀರ):ಕಳೆದ 2 ವರ್ಷಗಳಿಂದ ಕೊರೊನಾದಿಂದಾಗಿ ಎಲ್ಲ ಹಬ್ಬಗಳಿಗೂ ಮಂಕು ಕವಿದಿತ್ತು. ಈ ಬಾರಿ ಕೊರೊನಾ ಕಾರ್ಮೋಡ ಸರಿದ ಹಿನ್ನೆಲೆ ಹಬ್ಬಗಳು ಕಳೆ ಕಟ್ಟುತ್ತಿವೆ. ಈ ಬಾರಿ ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಭರ್ಜರಿಯಾಗಿ ಹಾಗೂ ಅದ್ಧೂರಿಯಾಗಿಯೇ ದೇಶದೆಲ್ಲೆಡೆ ಆಚರಿಸಲಾಗಿದೆ. ಅಂದ ಹಾಗೆ ಜಮ್ಮು ಕಾಶ್ಮೀರದಲ್ಲಿ ಈ ಬಾರಿ ಈದ್ ಸಂಭ್ರಮ ಜೋರಾಗೇ ಇತ್ತು.
ರಂಜಾನ್ ಮಾಸದ ಸಮಾಪ್ತಿಯ ಮುನ್ನಾ ದಿನ ಕಾಶ್ಮೀರದಲ್ಲಿ ಮಾಂಸದ ಮಾರಾಟ ಭರ್ಜರಿಯಾಗೇ ನಡೆದಿದೆ. ಬರೋಬ್ಬರಿ 100 ಕೋಟಿ ರೂಪಾಯಿ ಮೌಲ್ಯದ ಕುರಿ ಮಾಂಸವನ್ನು ಖರೀದಿಸಿ ಸೇವನೆ ಮಾಡಲಾಗಿದೆ. ಆದರೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಕಡಿಮೆಯೇ ಎಂದು ಮಟನ್ ಡೀಲರ್‌ಗಳು ಹೇಳುತ್ತಾರೆ.
ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಕುರಿ ಮಾಂಸಕ್ಕೆ ಬೇಡಿಕೆ ಕಡಿಮೆಯಾಗಿದೆ ಎಂದು ಕಾಶ್ಮೀರದ ಸಗಟು ಮಟನ್ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಮಂಜೂರ್ ಅಹ್ಮದ್ ಖಾನ್ ಹೇಳಿದ್ದಾರೆ. ಆದರೂ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಮಾಂಸ ಮಾರಾಟ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹೀಗಿದೆ ಅಂಕಿ- ಅಂಶ:ಮಟನ್ ಡೀಲರ್ಸ್ ನೀಡಿರುವ ಅಂಕಿ - ಅಂಶಗಳ ಪ್ರಕಾರ, ಈದ್-ಉಲ್-ಫಿತರ್‌ಗೆ ಒಂದು ವಾರ ಮುಂಚಿತವಾಗಿ, ದೆಹಲಿ, ರಾಜಸ್ಥಾನ ಮತ್ತು ದೇಶದ ಇತರ ಮಾರುಕಟ್ಟೆಗಳಿಂದ ಸುಮಾರು 97,000 ವಿವಿಧ ಕುರಿ ಮತ್ತು ಮೇಕೆಗಳನ್ನು ಆಮದು ಮಾಡಿಕೊಳ್ಳಲಾಗಿತ್ತಂತೆ. ದೆಹಲಿ ಮತ್ತು ರಾಜಸ್ಥಾನ ಮಾರುಕಟ್ಟೆಗಳಿಂದ ಕಾಶ್ಮೀರ್ ಮಾರುಕಟ್ಟೆಗೆ ಕುರಿ ಮಾಂಸ ಆಮದಾಗುತ್ತದೆ.