ಹೈದರಾಬಾದ್ :ನೀವು ತೆಲುಗಿನ 'ಬಳಗಂ' ಸಿನಿಮಾವನ್ನು ನೋಡಿದ್ದರೆ, ಅದರ ಸನ್ನಿವೇಶವೊಂದು ನಗು ತರಿಸುತ್ತದೆ. ವ್ಯಕ್ತಿಯ ಸಾವಿನ ಬಳಿಕ ತಿಥಿ ಕಾರ್ಯದಲ್ಲಿ ಮಟನ್ ಮೂಳೆಗಳು ಇಲ್ಲ ಎಂಬ ಕಾರಣಕ್ಕಾಗಿ ದೊಡ್ಡ ಗಲಾಟೆಯೇ ನಡೆಯುತ್ತದೆ. ಅಂಥದ್ದೇ ಒಂದು ಘಟನೆ ನಿಜಜೀವನದಲ್ಲಿ ನಡೆದಿದೆ. ಇದರ ಪರಿಣಾಮ ಮದುವೆಯೇ ರದ್ದಾಗಿದೆ.
ಘಟನೆ ನಡೆದಿದ್ದು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ. ಜಗ್ತಿಯಾಲ್ ಜಿಲ್ಲೆಯ ಮೆಟ್ಪಲ್ಲಿ ಮಂಡಲದ ಯುವಕನೊಂದಿಗೆ ಇಲ್ಲಿನ ಯುವತಿಗೆ ವಿವಾಹ ನಿಶ್ಚಯವಾಗಿತ್ತು. ಎರಡೂ ಕುಟುಂಬಗಳು ವರದಕ್ಷಿಣೆ, ಉಡುಗೊರೆಗಳು ಮತ್ತು ಇತರ ಸಾಂಪ್ರದಾಯಿಕ ಕೊಡು ತೆಗೆದುಕೊಳ್ಳುವಿಕೆ ಬಗ್ಗೆ ಮಾತು ಮುಗಿಸಿದ್ದಾರೆ. ಬಳಿಕ ಯುವತಿಯ ಮನೆಯಲ್ಲಿ ಮಾಂಸಾಹಾರದ ಔತಣಕೂಟ ಹಮ್ಮಿಕೊಂಡಿದ್ದರು. ಅದರಲ್ಲಿ ಮಟನ್ ಮಾಡಿಲ್ಲ ಎಂದು ಹುಡುಗನ ಕಡೆಯವರು ವರಾತ ತೆಗೆದಿದ್ದಾರೆ.
ಮಟನ್ ಊಟಕ್ಕಾಗಿ ಬಡಿದಾಟ:ಔತಣಕೂಟದಲ್ಲಿ ಮುಖ್ಯವಾಗಿ ಮಟನ್ ಪದಾರ್ಥವೇ ಇಲ್ಲ ಎಂದು ಯುವಕನ ಸಂಬಂಧಿಕರು, ಯುವತಿಯ ಮನೆಯವರೊಂದಿಗೆ ತಗಾದೆ ತೆಗೆದಿದ್ದಾರೆ. ನೀವು ಮಟನ್ ಊಟ ಹಾಕಿಸುವುದಾಗಿ ಹೇಳಿದ್ದೀರಿ, ಈಗ ನೋಡಿದರೆ, ಆ ಭೋಜನವೇ ಇಲ್ಲ ಎಂದು ಪ್ರಶ್ನಿಸಿದ್ದಾರೆ. ಇಷ್ಟೇ ಕಾರಣ, ಎರಡೂ ಕುಟುಂಬಗಳ ಮಧ್ಯೆ ದೊಡ್ಡ ರಂಪಾಟವೇ ನಡೆದಿದೆ. ವಿಚಿತ್ರ ಅದರಲ್ಲಿ ಕೆಲವರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಸಂಘರ್ಷ ತೀವ್ರವಾಗಿ ಪೊಲೀಸ್ ಮೆಟ್ಟಿಲೇರುವವರೆಗೂ ಹೋಗಿದೆ.