ನವದೆಹಲಿ:''ಉತ್ತರಾಖಂಡದ ಪಾರ್ವತಿ ಕುಂಡ್ ಮತ್ತು ಜಾಗೇಶ್ವರ ದೇವಾಲಯಗಳಿಗೆ ತಮ್ಮ ಭೇಟಿ ಅತ್ಯಂತ ವಿಶೇಷತೆಯಿಂದ ಕೂಡಿದೆ. ನೈಸರ್ಗಿಕ ಸೌಂದರ್ಯ ಮತ್ತು ದೈವಿಕತೆಗಾಗಿ ಈ ಪವಿತ್ರ ಸ್ಥಳಗಳಿಗೆ ಭೇಟಿ ನೀಡಬೇಕಾಗುತ್ತದೆ'' ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಎಕ್ಸ್ನಲ್ಲಿ ( ಹಿಂದಿನ ಟ್ವಿಟ್ಟರ್) ಪೋಸ್ಟ್ ಮಾಡಿದ ಪ್ರಧಾನಿ ಮೋದಿ ಅವರು, "ಉತ್ತರಾಖಂಡದಲ್ಲಿ ನೀವು ಭೇಟಿ ನೀಡಲೇಬೇಕಾದ ಒಂದು ಸ್ಥಳವಿದ್ದರೆ ತಿಳಿಸಿ ಎಂದು ಯಾರಾದರೂ ನನ್ನನ್ನು ಕೇಳಿದರೆ, ರಾಜ್ಯದ ಕುಮಾನ್ ಪ್ರದೇಶದ ಪಾರ್ವತಿ ಕುಂಡ್ ಮತ್ತು ಜಾಗೇಶ್ವರ ದೇವಾಲಯಗಳಿಗೆ ಭೇಟಿ ನೀಡಿ ಎಂದು ನಾನು ಅವರಿಗೆ ಸಲಹೆ ನೀಡುತ್ತೇನೆ. ಈ ಭಾಗದ ಪ್ರಾಕೃತಿಕ ಸೌಂದರ್ಯ ಮತ್ತು ದೈವತ್ವವು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ" ಎಂದು ಅವರು ತಿಳಿಸಿದ್ದಾರೆ.
"ಖಂಡಿತವಾಗಿಯೂ, ಉತ್ತರಾಖಂಡವು ಭೇಟಿ ನೀಡಲು ಯೋಗ್ಯವಾದ ಅನೇಕ ಪ್ರಸಿದ್ಧ ಸ್ಥಳಗಳನ್ನು ಹೊಂದಿದೆ. ನಾನು ಆಗಾಗ್ಗೆ ಈ ರಾಜ್ಯಕ್ಕೆ ಭೇಟಿ ನೀಡಿದ್ದೇನೆ. ಕೇದಾರನಾಥ ಮತ್ತು ಬದರಿನಾಥದ ಪವಿತ್ರ ಸ್ಥಳಗಳು ಅತ್ಯಂತ ಸ್ಮರಣೀಯ ಅನುಭವಗಳು ಲಭಿಸುತ್ತವೆ. ಜೊತೆಗೆ ಹಲವು ವರ್ಷಗಳ ನಂತರ, ಪಾರ್ವತಿ ಕುಂಡ್ ಮತ್ತು ಜಾಗೇಶ್ವರ ದೇವಾಲಯಗಳಿಗೆ ನೀಡುವ ಭೇಟಿಯು ತುಂಬಾ ವಿಶೇಷತೆಯಿಂದ ಕೂಡಿದೆ" ಎಂದಿದ್ದಾರೆ.
5,338 ಅಡಿ ಎತ್ತರದಲ್ಲಿದೆ ಹಿಂದೂ ಯಾತ್ರಾಸ್ಥಳ: ಪಿಥೋರಗಢದಲ್ಲಿರುವ ಪಾರ್ವತಿ ಕುಂಡ್ ಭಾರತದ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಒಂದಾಗಿದೆ. ಸುಮಾರು 5,338 ಅಡಿ ಎತ್ತರದಲ್ಲಿರುವ ಹಿಂದೂ ಯಾತ್ರಾಸ್ಥಳವು ಪ್ರತಿವರ್ಷ ಭಕ್ತರನ್ನು ಸೆಳೆಯುತ್ತದೆ. ಈ ತಾಣವು ಮಹಾನ್ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಶಿವ ಮತ್ತು ಪಾರ್ವತಿ ದೇವಿಯು ಧ್ಯಾನ ಮಾಡಿದ ಸ್ಥಳ ಎಂದು ನಂಬಲಾಗಿದೆ. ದೈವಿಕ ದಂಪತಿಯ ಆಶೀರ್ವಾದ ಪಡೆಯಲು ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ.