ಪುಲ್ವಾಮಾ(ಜಮ್ಮು-ಕಾಶ್ಮೀರ): ಭಾರತ ದೇಗುಲಗಳ ಬೀಡು, ಇಲ್ಲಿ ಲಕ್ಷಾಂತರ ದೇಗುಲಗಳಿದ್ದು, ಅವುಗಳಲ್ಲಿ ಕೆಲ ದೇವಸ್ಥಾನಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಂತಹದೊಂದು ದೇವಸ್ಥಾನ ಕಣಿವೆ ನಾಡು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಇದಕ್ಕೆ ಬರೋಬ್ಬರಿ 5 ಸಾವಿರ ವರ್ಷಗಳಷ್ಟು ಹಳೆಯದಾದ ಇತಿಹಾಸವಿದೆ ಎನ್ನಲಾಗ್ತಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಈ ಜನಪ್ರಿಯ ದೇವಾಲಯವಿದೆ. 10ನೇ ಶತಮಾನದ ಶಿವನ ದೇಗುಲ ಇದಾಗಿದೆ. ಏಕತೆಯ ಸಂಕೇತ ಸಾರುವ ಈ ದೇಗುಲದಲ್ಲಿ ಎಲ್ಲ ಕೆಲಸ, ದೇವಾಲಯದ ನಿರ್ವಹಣೆ ಮುಸ್ಲಿಂರಿಂದ ನಡೆಯುತ್ತದೆ. ಪುಲ್ವಾಮಾ ಪ್ರದೇಶದಲ್ಲಿ ಹೆಚ್ಚಾಗಿ ಮುಸ್ಲಿಂ ಕುಟುಂಬಗಳು ವಾಸವಾಗಿದ್ದು, ದೇವಾಲಯದ ನಿರ್ವಹಣೆ ಅವರಿಂದ ನಡೆಯುತ್ತದೆ. ಏಕಶಿಲೆ ಕೆತ್ತನೆಯಲ್ಲಿ ಈ ಸುಂದರ ದೇಗುಲ ನಿರ್ಮಾಣಗೊಂಡಿದ್ದು, ಇದರ ಬಗ್ಗೆ ಬ್ರಿಟಿಷ್ ಸೆಟ್ಲಮೆಂಟ್ ಕಮಿಷನರ್ ಸರ್ ವಾಲ್ಟರ್ ರೋಪರ್ ಲಾರೆನ್ಸ್ ಅವರ 'ದಿ ವ್ಯಾಲಿ ಆಫ್ ಕಾಶ್ಮೀರ್'ನಲ್ಲಿ ಉಲ್ಲೇಖವಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಕ್ರಿಸ್ತಪೂರ್ವ 483 ಮತ್ತು 490ರ ನಡುವೆ ಕಣಿವೆ ನಾಡು ಆಳಿರುವ ನರೇಂದ್ರಾದಿತ್ಯನ ಆಳ್ವಿಕೆಯಲ್ಲಿ ಈ ಶಿವನ ದೇವಾಲಯ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಪುಲ್ವಾಮಾದ ಅಚಾನ್ ಗ್ರಾಮದಲ್ಲಿ ಈ ದೇಗುಲವಿದೆ. 2,200ಕ್ಕೂ ಹೆಚ್ಚಿನ ಜನಸಂಖ್ಯೆ ಈ ಗ್ರಾಮದಲ್ಲಿದ್ದು, ಪ್ರಧಾನವಾಗಿ ಮುಸ್ಲಿಂರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ದೇವಸ್ಥಾನದ ದುರಸ್ತಿ ಕಾರ್ಯ ಸಹ ಇವರಿಂದ ನಡೆಯುತ್ತದೆ.