ನವದೆಹಲಿ: ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷವು 'ಮುಸ್ಲಿಮೀನ್' ಪದದ ಬಗ್ಗೆ ಮಂಗಳವಾರ ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ಪಕ್ಷದ ಹೆಸರಿನಲ್ಲಿ ಕೇವಲ 'ಮುಸ್ಲಿಮೀನ್' ಪದವನ್ನು ಬಳಸುವುದರಿಂದ ಜಾತ್ಯತೀತತೆಯ ತತ್ವವನ್ನು ಉಲ್ಲಂಘಿಸುವುದಿಲ್ಲ ಅಥವಾ ಧರ್ಮದ ಹೆಸರಿನಲ್ಲಿ ಮತದಾರರನ್ನು ಆಕರ್ಷಿಸುವುದಿಲ್ಲ ಎಂದು ಎಐಎಂಐಎಂ ತಿಳಿಸಿದೆ.
ಇದನ್ನೂ ಓದಿ:ಮುಸ್ಲಿಂ ಮತ ಬ್ಯಾಂಕ್ ವಿಭಜನೆ ತಡೆಗೆ ಕಾರ್ಯತಂತ್ರ.. ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ಮಹತ್ವದ ಸಭೆ
ರಾಜಕೀಯ ಪಕ್ಷಗಳ ಚಿಹ್ನೆ ಮತ್ತು ಹೆಸರಿನ ಕುರಿತು ತಕರಾರು ಎತ್ತಿ ಸೈಯದ್ ವಸೀಂ ರಿಜ್ವಿ ಎಂಬುವವರು ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಸಲ್ಲಿಸಿದ್ದಾರೆ. ಯಾವುದೇ ಧರ್ಮದ ಹೆಸರನ್ನು ತಮ್ಮ ಪಕ್ಷದ ಹೆಸರಿನಲ್ಲಿ ಬಳಸುತ್ತಿರುವ ಅಥವಾ ತಮ್ಮ ಚಿಹ್ನೆಗಳಲ್ಲಿ ಧಾರ್ಮಿಕ ಅರ್ಥಗಳನ್ನು ಹೊಂದಿರುವ ರಾಜಕೀಯ ಪಕ್ಷಗಳಿಗೆ ನೀಡಲಾದ ಚಿಹ್ನೆ ಮತ್ತು ಹೆಸರನ್ನು ರದ್ದುಗೊಳಿಸುವಂತೆ ಕೋರಿ ಈ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಅರ್ಜಿಗೆ ಪ್ರತಿಕ್ರಿಯೆಯಾಗಿ ಎಐಎಂಐಎಂ ಪಕ್ಷವು ತನ್ನ ಅಫಿಡವಿಟ್ ಸಲ್ಲಿಸಿದೆ.
ಎಲ್ಲರಿಗೂ ಪಕ್ಷದ ಸದಸ್ಯತ್ವ ಮುಕ್ತ:ಎಐಎಂಐಎಂ ಪಕ್ಷವು ತನ್ನ ಸದಸ್ಯರು ಮತ್ತು ಕಾರ್ಯಕರ್ತರಿಗೆ ಮತ ಕೇಳಲು ಧರ್ಮದ ಹೆಸರನ್ನು ಬಳಸಲು ಎಂದಿಗೂ ಕೇಳಿಲ್ಲ. ಮೇಲಾಗಿ ಪಕ್ಷದ ಸದಸ್ಯತ್ವವು ಧರ್ಮ, ಜಾತಿ, ಪಂಥ ಇತ್ಯಾದಿಗಳನ್ನು ಲೆಕ್ಕಿಸದೆ ಎಲ್ಲರಿಗೂ ಮುಕ್ತವಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯದ ಮುಂದೆ ಅಸಾದುದ್ದೀನ್ ಓವೈಸಿ ನೇತೃತ್ವದ ಪಕ್ಷವು ವಾದಿಸಿದೆ. ಅಲ್ಲದೇ, ಪಕ್ಷವು ಯಾವಾಗಲೂ ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಸಾಮಾಜಿಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಕ್ಕು ಮತ್ತು ನೀತಿಗಳನ್ನು ರಕ್ಷಿಸುವ ಉದ್ದೇಶಯನ್ನು ಹೊಂದಿದೆ ಎಂದೂ ತಿಳಿಸಿದೆ.