ಕುಶಿನಗರ (ಉತ್ತರಪ್ರದೇಶ) :ಜಿಲ್ಲೆಯ ರಾಮಕೋಲಾ ಪೊಲೀಸ್ ಠಾಣೆಯ ಕಥಘರ್ಹಿ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮುಸ್ಲಿಂ ಯುವಕನೊಬ್ಬ ಬಿಜೆಪಿ ಪರ ಪ್ರಚಾರ ಮಾಡಿ ಸರ್ಕಾರ ರಚನೆಯಾದ ವೇಳೆ ಸಿಹಿ ಹಂಚಿದ್ದಕ್ಕೆ ಪ್ರಾಣ ಕಳೆದುಕೊಂಡಿದ್ದಾನೆ. ಪ್ರಕರಣ ಹಿನ್ನೆಲೆ ಕುಟುಂಬಸ್ಥರು ಶವ ಸಂಸ್ಕಾರ ಮಾಡಲು ನಿರಾಕರಿಸಿದ್ದರು.
ಮೃತ ಬಾಬರ್‌ನ ಸಂಬಂಧಿಕರ ಪ್ರಕಾರ, ಇತ್ತೀಚೆಗೆ ಬಾಬರ್ 2022 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದನಂತೆ. ಇದರಿಂದ ಅಕ್ಕಪಕ್ಕದ ಜನರು ಸಿಟ್ಟಿಗೆದ್ದಿದ್ದರು ಎನ್ನಲಾಗ್ತಿದೆ. ಅವರು ಬಾಬರ್‌ಗೆ ಬಿಜೆಪಿ ಪರ ಪ್ರಚಾರ ಮಾಡಬೇಡ ಎಂದು ಪದೇ ಪದೇ ಎಚ್ಚರಿಕೆ ನೀಡಿದ್ದರಂತೆ. ಹೇಳಿದ ಮಾತು ಕೇಳದೆ ಇದ್ದರೆ ಕೊಲ್ಲುವುದಾಗಿ ಬೆದರಿಕೆಯನ್ನು ಸಹ ಹಾಕಿದ್ದರಂತೆ. ಈ ಬಗ್ಗೆ ಬಾಬರ್ ರಾಮಕೋಲಾ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದ ಎಂದು ತಿಳಿದುಬಂದಿದೆ.
ಮಾರ್ಚ್ 20 ರಂದು ಬಾಬರ್ ಅಂಗಡಿಯಿಂದ ಹಿಂತಿರುಗುತ್ತಿದ್ದ ವೇಳೆ ಅಜೀಮುಲ್ಲಾ, ಆರಿಫ್, ತಾಹಿದ್, ಪರ್ವೇಜ್ ಎದುರಾಗಿದ್ದಾರೆ. ಆಗ ಬಾಬರ್ ಜೈ ಶ್ರೀ ರಾಮ್ ಘೋಷಣೆಯನ್ನು ಸಹ ಕೂಗಿದ್ದಾನೆ. ಇದರಿಂದ ತೀವ್ರ ಕೋಪಕ್ಕೆ ಒಳಗಾದ ಅವರು ಬಾಬರ್ ಮೇಲೆ ದಾಳಿ ಮಾಡಿದ್ದಾರೆ.