ಪಾಟ್ನಾ(ಬಿಹಾರ): ಛತ್ ಬಿಹಾರ್ನ ಪ್ರಮುಖ ಹಬ್ಬ. ದೀಪಾವಳಿ ಸಂದರ್ಭದಲ್ಲಿ ಬರೋ ಈ ಹಬ್ಬವನ್ನು ಹಿಂದುಗಳು ಬಹಳ ಸಂಭ್ರಮದಿಂದ ಆಚರಿಸ್ತಾರೆ. ಈ ಛತ್ ಹಬ್ಬದ ಇನ್ನೊಂದು ವಿಶೇಷವೆಂದರೆ ಮಣ್ಣಿನ ಒಲೆಗಳು.
ಹೌದು, ಮಣ್ಣಿನ ಒಲೆಗಳಿಲ್ಲದೆ ಛತ್ ಹಬ್ಬ ಪೂರ್ಣವಾಗುವುದಿಲ್ಲ. ಆದರೆ ಈ ಒಲೆಗಳನ್ನು ತಯಾರಿಸುವವರು ಮಾತ್ರ ಮುಸ್ಲಿಂ ಮಹಿಳೆಯರು. ಪಾಟ್ನಾದ ದಾರಿ ದಾರಿಗಳಲ್ಲಿ ಈ ಒಲೆ ತಯಾರಿಸುತ್ತಿರುವ ಮಹಿಳೆಯರನ್ನು ಕಾಣಬಹುದು. ಹಲವು ದಶಕಗಳಿಂದ ಇವರು ಇದೇ ಕಾಯಕವನ್ನು ಮಾಡಿಕೊಂಡು ಬಂದಿದ್ದಾರೆ.
ಛತ್ ಆಚರಣೆಯಲ್ಲಿ ಸ್ವಚ್ಛತೆಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಛತ್ ಪೂಜೆ ಮಾಡುವ ಮಹಿಳೆಯರು ಅದಕ್ಕಾಗಿ ಪ್ರತ್ಯೇಕ ಮಡಿಯಲ್ಲಿ ಇರಬೇಕಾಗುತ್ತದೆ. ಅದಕ್ಕಾಗಿ ಪ್ರತ್ಯೇಕ ಒಲೆಗಳಲ್ಲಿ ಆಹಾರ ತಯಾರಿಸಿ ಪೂಜೆ ಪೂರ್ಣಗೊಳಿಸುತ್ತಾರೆ.
ಈ ಜೇಡಿಮಣ್ಣಿನ ಒಲೆಗಳು ಹಬ್ಬದ ಪ್ರಮುಖ ಭಾಗವಾಗಿದ್ದು, ರಸ್ತೆಯ ಕಾಲು ದಾರಿಗಳಲ್ಲಿ ವಾಸಿಸುವ ನೂರಾರು ಮುಸ್ಲಿಂ ಮಹಿಳೆಯರು ಒಲೆಗಳನ್ನು ತಯಾರಿಸುತ್ತಾರೆ. ಈ ಮಣ್ಣಿನ ಒಲೆಗಳನ್ನು ಖರೀದಿಸಲು ಪ್ರತಿ ವರ್ಷ ಸಾವಿರಾರು ಜನರು ಬರುತ್ತಾರೆ. ಆದರೆ ಈ ವರ್ಷ ಕೊರೊನಾ ಸಾಂಕ್ರಾಮಿಕ ರೋಗವು ಅವರ ವ್ಯವಹಾರದ ಮೇಲೆ ಕೆಟ್ಟ ಪರಿಣಾಮ ಬೀರಿದೆ.