ಕೋಯಿಕ್ಕೋಡ್(ಕೇರಳ): ಇಲ್ಲಿನ ತಾಮರಸ್ಸೆರಿಯ ಮುಸ್ಲಿಂ ಯುವತಿ ಗುರುವಾಯೂರು ದೇವಸ್ಥಾನಕ್ಕೆ 101 ಶ್ರೀ ಕೃಷ್ಣನ ಕಲಾಕೃತಿಗಳನ್ನು ತನ್ನ ಕೈಯಾರೆ ಚಿತ್ರಿಸಿ ಉಡುಗೊರೆ ನೀಡಿದ್ದಾರೆ. ಹೊಸ ವರ್ಷದ ಹಿನ್ನಲೆ ಇಂದು ದೇವಾಲಯದ ತಂತ್ರಿಗಳ ನೇತೃತ್ವದಲ್ಲಿ ಕೃಷ್ಣನ ಕಲಾಕೃತಿಗಳನ್ನು ದೇವಾಲಯಕ್ಕೆ ಹಸ್ತಾಂತರಿಸಿದರು.
ಜಸ್ನಾ ಸಲೀಂ ಮೂಲತಃ ಕೋಯಿಕ್ಕೋಡ್ ಜಿಲ್ಲೆಯ ತಾಮಸ್ಸೇರಿಯ ನಿವಾಸಿಯಾಗಿದ್ದಾರೆ. ಹಿಂದೊಮ್ಮೆ ತಮ್ಮ ಮನೆ ನಿರ್ಮಾಣ ಸಂದರ್ಭ ನಿರ್ಮಿಸಿದ್ದ ಶೆಡ್ನಲ್ಲಿ ಮೊದಲ ಬಾರಿಗೆ ಜಸ್ನಾ ಕೃಷ್ಣನ ಭಾವಚಿತ್ರವನ್ನು ಕಂಡು ಕುತೂಹಲದಿಂದ ಬಿಡಿಸಿದ್ದರು. ಈಕೆಯ ಪ್ರತಿಭೆಯನ್ನು ಕಂಡ ಪತಿ ಶ್ಲಾಘಿಸಿದರೂ, ಮನೆಯವರಿಗೆ ತಿಳಿದರೆ ತೊಂದರೆಯಾಗುತ್ತದೆ ಎಂದು ಹೇಳಿ ಚಿತ್ರವನ್ನು ಹಾಳು ಮಾಡುವಂತೆ ಸೂಚಿಸಿದ್ದರು. ಆದರೆ ಇದಕ್ಕೆ ಒಪ್ಪದ ಜಸ್ನಾ, ಅಂತಿಮವಾಗಿ ಈ ಕಲಾಕೃತಿಯನ್ನು ತಾಮರಸ್ಸೆರಿಯ ನಂಬೂದಿರಿ ಕುಟುಂಬಕ್ಕೆ ಉಡುಗೊರೆಯಾಗಿ ನೀಡಿದ್ದರು.
ಮುಸ್ಲಿಂ ಯುವತಿ ಶ್ರೀ ಕೃಷ್ಣನ ಚಿತ್ರ ಬಿಡಿಸಿದ್ದು, ಈ ನಂಬೂದಿರಿ ಅವರಿಂದ ಗ್ರಾಮದೆಲ್ಲೆಡೆ ಹರಡಿತು. ಇದರಿಂದಾಗಿ ಜಸ್ನಾರಿಗೆ ಕೃಷ್ಣನ ಕಲಾಕೃತಿಯನ್ನು ಚಿತ್ರಿಸಿ ಕೊಡುವಂತೆಯೂ ಬೇಡಿಕೆ ಬರತೊಡಗಿತು.ಇಂದು ಜಸ್ನಾರಿಗೆ ಇದು ಕೇವಲ ಹವ್ಯಾಸವಾಗಿರದೇ ಜೀವನಾಧಾರವಾಗಿದೆ.