ಕೊಚ್ಚಿ: ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ನಡೆಯುವ ಅಪ್ರಾಪ್ತ ವಯಸ್ಕರ ವಿವಾಹಗಳನ್ನು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆಯಿಂದ ಹೊರಗಿಡಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ವಧು ಅಥವಾ ವರನು ಅಪ್ರಾಪ್ತ ವಯಸ್ಕನಾ(/ಳಾ)ಗಿದ್ದರೆ, ವಿವಾಹದ ಸಿಂಧುತ್ವ ಅಥವಾ ಇನ್ನಾವುದೇ ಕಾರಣಗಳನ್ನು ಲೆಕ್ಕಿಸದೆ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಅಪರಾಧಗಳು ಅನ್ವಯಿಸುತ್ತವೆ ಎಂದು ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.
ಪೋಕ್ಸೊ ಕಾಯಿದೆಯು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಗಾಗಿ ವಿಶೇಷವಾಗಿ ಜಾರಿಗೊಳಿಸಲಾದ ವಿಶೇಷ ಶಾಸನವಾಗಿದೆ. ಯಾವುದೇ ಮಗುವಿನ ಮೇಲೆ ನಡೆಯುವ ಪ್ರತಿಯೊಂದು ಲೈಂಗಿಕ ಶೋಷಣೆಯನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಈ ಅಪರಾಧ ಕಾಯ್ದೆಯಿಂದ ಯಾವುದೇ ಮದುವೆಯನ್ನು ಹೊರಗಿಡಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರ ಏಕ ಪೀಠ ತಿಳಿಸಿದೆ.
ಪೋಕ್ಸೊ ಕಾಯಿದೆಯು ಒಂದು ವಿಶೇಷ ಶಾಸನವಾಗಿದೆ. ಉನ್ನತ ಸಾಮಾಜಿಕ ಚಿಂತನೆಯ ಪ್ರಗತಿಯ ಕಾರಣದಿಂದ ಈ ಕಾಯ್ದೆ ರೂಪಿಸಲ್ಪಟ್ಟಿದೆ. ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ನ್ಯಾಯಶಾಸ್ತ್ರದಿಂದ ಉದ್ಭವಿಸುವ ತತ್ವಗಳ ಆಧಾರದ ಮೇಲೆ ಈ ವಿಶೇಷ ಶಾಸನವನ್ನು ಜಾರಿಗೊಳಿಸಲಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ ನ್ಯಾಯಶಾಸ್ತ್ರವು ದುರ್ಬಲ, ಮೋಸಕ್ಕೊಳಗಾಗುವ ಮತ್ತು ಮುಗ್ಧ ಮಕ್ಕಳನ್ನು ರಕ್ಷಿಸುವ ಅಗತ್ಯದಿಂದ ವಿಕಸನಗೊಂಡಿದೆ. ಮದುವೆ ಸೇರಿದಂತೆ ವಿವಿಧ ಮುಖವಾಡಗಳ ಅಡಿಯಲ್ಲಿ ಲೈಂಗಿಕ ಅತ್ಯಾಚಾರದಿಂದ ಮಗುವನ್ನು ರಕ್ಷಿಸುವ ಶಾಸಕಾಂಗ ಉದ್ದೇಶವು ಶಾಸನಬದ್ಧ ನಿಬಂಧನೆಗಳಿಂದ ಸ್ಪಷ್ಟವಾಗಿ ಉಲ್ಲೇಖಿಸಲ್ಪಟ್ಟಿದೆ ಎಂದು ಅವರು ಹೇಳಿದರು.