ನವದೆಹಲಿ: ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಟೈಲರ್ನ ಕೊಲೆ ಮಾಡಿದ್ದನ್ನು ದೇಶದ ಪ್ರಮುಖ ಮುಸ್ಲಿಂ ಸಂಘಟನೆಗಳು ಖಂಡಿಸಿದ್ದು, ಈ ಕೃತ್ಯ ಇಸ್ಲಾಂಗೆ ವಿರುದ್ಧವಾಗಿದ್ದು, ಕಾನೂನು ಕೈಗೆ ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿವೆ.
ಇಸ್ಲಾಂ ಧರ್ಮಕ್ಕೆ ಅಪಮಾನ ಮಾಡಿದ್ದಾನೆ ಎಂದು ಆರೋಪಿಸಿ ಕನ್ಹಯ್ಯಾ ಲಾಲ್ ಎಂಬಾತನ ಕೊಲೆ ಮಾಡಿ ಘಟನೆಯ ವಿಡಿಯೋ ವೈರಲ್ ಮಾಡಿದ್ದನ್ನು ಖಂಡಿಸಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮತ್ತು ಜಮಿಯತ್-ಎ-ಉಲೇಮಾ ಸಂಘಟನೆಗಳು ಹೇಳಿಕೆಗಳನ್ನು ಬಿಡುಗಡೆ ಮಾಡಿವೆ.
"ಯಾವುದೇ ಧರ್ಮದ ಪೂಜನೀಯರನ್ನು ಅವಮಾನಿಸುವುದು ಗಂಭೀರ ಸ್ವರೂಪದ ಅಪರಾಧ. ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು ಮುಸಲ್ಮಾನರಿಗೆ ನೋವು ತಂದಿದೆ. ನೂಪುರ್ ಶರ್ಮಾ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಆದಾಗ್ಯೂ ವ್ಯಕ್ತಿಯೊಬ್ಬನನ್ನು ಅಪರಾಧಿ ಎಂದು ತೀರ್ಮಾನಿಸಿ ಕಾನೂನು ಕೈಗೆ ತೆಗೆದುಕೊಳ್ಳುವುದು, ವ್ಯಕ್ತಿಯ ಕೊಲೆ ಮಾಡುವುದು ಅತ್ಯಂತ ಖಂಡನೀಯ." ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಪ್ರಕಟಣೆಯಲ್ಲಿ ತಿಳಿಸಿದೆ.
"ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ ಹಾಗೂ ಇಸ್ಲಾಂ ಶರಿಯಾ ಕೂಡ ಇದನ್ನು ಮಾನ್ಯ ಮಾಡುವುದಿಲ್ಲ. ಹೀಗಾಗಿ ಉದಯಪುರ್ ಘಟನೆಯನ್ನು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಖಂಡಿಸುತ್ತದೆ." ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
"ಪ್ರವಾದಿ ಮೊಹಮ್ಮದರಿಗೆ ಅವಮಾನ ಮಾಡಿದ ಆರೋಪದಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿದ್ದು ಕಾನೂನುಬಾಹಿರ ಹಾಗೂ ಇದು ಇಸ್ಲಾಂಗೆ ವಿರುದ್ಧವಾಗಿದೆ. ನಮ್ಮ ದೇಶದಲ್ಲಿ ಕಾನೂನಿನ ಒಂದು ವ್ಯವಸ್ಥೆಯಿದೆ. ಕಾನೂನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ." ಎಂದು ಜಮಿಯತ್-ಎ-ಉಲೇಮಾ ಹಿಂದ್ ನ ಪ್ರಧಾನ ಕಾರ್ಯದರ್ಶಿ ಮೌಲಾನಾ ಹಕೀಮುದ್ದೀನ್ ಕಾಸ್ಮಿ ಹೇಳಿದ್ದಾರೆ.