ಬುರ್ಹಾನ್‌ಪುರ (ಮಧ್ಯಪ್ರದೇಶ): ಸರ್ಕಾರಿ ಯೋಜನೆಯಡಿ ಪಡೆದ ಆಟೋ ಮೇಲೆ ಪ್ರಧಾನಿ ಮೋದಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾವಚಿತ್ರ ಹಾಕಿಸಿಕೊಂಡ ಮುಸ್ಲಿಂ ಯುವಕನೊಬ್ಬನಿಗೆ ಸ್ವ-ಸಮಾಜದವರೇ ಬೆದರಿಕೆ ಹಾಕುತ್ತಿರುವ ಪ್ರಕರಣ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ನೆಹರು ನಗರದ ನಿವಾಸಿ ಶೇಖ್ ಅಕ್ಬರ್ ಆಟೋ ಓಡಿಸುತ್ತಿದ್ದಾರೆ. ಆದರೆ, ಆಟೋ ಹಿಂದೆ ಪ್ರಧಾನಿ ಮೋದಿ ಹಾಗೂ ಮೋಹನ್ ಭಾಗವತ್ ಫೋಟೋ ಹಾಕಿರುವುದೇ ಈತನಿಗೆ ಕಂಟಕವಾಗಿದೆ. ತಮ್ಮದೇ ಸಮುದಾಯದವರಿಂದ ಬೆದರಿಕೆ ಮಾತ್ರವಲ್ಲದೇ ಆಗಾಗ್ಗೆ ಹಲ್ಲೆಗೂ ಒಳಗಾಗಿದ್ದಾರೆ. ಇದರಿಂದ ಬೇಸತ್ತ ಅಕ್ಬರ್ ಪೊಲೀಸರ ಮೊರೆ ಹೋಗಿದ್ದಾರೆ.
ಸರ್ಕಾರಿ ಫಲಾನುಭವಿ: ಈ ಹಿಂದೆ ನಿರುದ್ಯೋಗಿಯಾಗಿದ್ದ ಅಕ್ಬರ್ಗೆ ವಾಸಕ್ಕೆ ಮನೆಯೂ ಇರಲಿಲ್ಲ. 2017ರಲ್ಲಿ ಪಿಎಂ ರೋಜಗಾರ್ ಯೋಜನೆಯಡಿ ಆಟೋ ಪಡೆದಿದ್ದೇನೆ. ಅಂದಿನಿಂದಲೂ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಅಲ್ಲದೇ, 2019-20 ಸಾಲಿನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಮಂಜೂರಾಗಿದೆ. ಮನೆಗೆ ಎರಡೂವರೆ ಲಕ್ಷ ರೂಪಾಯಿ ನೆರವು ಕೂಡ ಸಿಕ್ಕಿದೆ. ಆದ್ದರಿಂದ ಪ್ರಧಾನಿ ಮೋದಿ ಮತ್ತು ಮೋಹನ್ ಭಾಗವತ್ ಫೋಟೋ ಆಟೋ ಹಿಂದೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ.