ಕರ್ನಾಟಕ

karnataka

ETV Bharat / bharat

ಮನೆಯಲ್ಲಿ ದುರ್ಗಾದೇವಿ ವಿಗ್ರಹ ಪ್ರತಿಷ್ಠಾಪಿಸಿ ನವರಾತ್ರಿ ಆಚರಿಸುವ ಮುಸ್ಲಿಂ ಕುಟುಂಬ

ಉತ್ತರಪ್ರದೇಶದ ಅಲಿಗಢದ ಮುಸ್ಲಿಂ ಕುಟುಂಬವೊಂದು ನವರಾತ್ರಿ ಆಚರಣೆ ಆರಂಭಿಸಿದ್ದು, ಮನೆಯಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದರು.

ಮುಸ್ಲಿಂ ಕುಟುಂಬದಿಂದ ದುರ್ಗಾದೇವಿ ವಿಗ್ರಹ ಪ್ರತಿಷ್ಠಾಪನೆ
ಮುಸ್ಲಿಂ ಕುಟುಂಬದಿಂದ ದುರ್ಗಾದೇವಿ ವಿಗ್ರಹ ಪ್ರತಿಷ್ಠಾಪನೆ

By ETV Bharat Karnataka Team

Published : Oct 15, 2023, 9:40 PM IST

ಅಲಿಗಢ:ಇಂದಿನಿಂದ ಶರನ್ನವರಾತ್ರಿ ಆರಂಭವಾಗಿದೆ. ಜನರು ಶಕ್ತಿದೇವತೆ ದುರ್ಗಾದೇವಿಯ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಅಲಿಗಢದ ಮುಸ್ಲಿಂ ಕುಟುಂಬವೊಂದು ಜಗನ್ಮಾತೆಯ ವಿಗ್ರಹವನ್ನು ತಮ್ಮ ಮನೆಯಲ್ಲಿ ಕುಳ್ಳಿರಿಸಿ ಪೂಜಿಸಿದರು. ಈ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದರು.

ನಗರದ ನಿವಾಸಿಯಾದ ರೂಬಿ ಎಂಬವರ ಮನೆಯಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಹಿಂದುಗಳಂತೆಯೇ ದೇವಿಯನ್ನು ಆರಾಧಿಸುತ್ತಿದ್ದಾರೆ. ಕುಟುಂಬದವರು ಉಪವಾಸ ಕೂಡ ಮಾಡುತ್ತಿದ್ದಾರೆ. ಮುಸ್ಲಿಂ ಕುಟುಂಬದವರಾಗಿದ್ದರೂ, ಸನಾತನ ಧರ್ಮದ ಪ್ರಕಾರ ಪೂಜೆ ಸಲ್ಲಿಸಿದರು. ಅಲ್ಲಾಹುವಿನ ಜೊತೆಗೆ ಎಲ್ಲ ದೇವ-ದೇವತೆಗಳಲ್ಲೂ ಆಳವಾದ ನಂಬಿಕೆ ಇದೆ ಎನ್ನುತ್ತಾರೆ ಕುಟುಂಬದವರು.

ರೂಬಿ ಮತ್ತವರ ಕುಟುಂಬಸ್ಥರು ಸನಾತನ ಧರ್ಮದ ಪದ್ಧತಿಯಂತೆ ದುರ್ಗಾಮಾತೆಯ ವಿಗ್ರಹವನ್ನು ತಂದು ಮನೆಯಲ್ಲಿ ಭಾನುವಾರ ಸ್ಥಾಪಿಸಿದರು. ನವರಾತ್ರಿಯ ಮೊದಲ ದಿನವಾದ ಇಂದು ಅಮ್ಮನವರಿಗೆ ಪೂಜೆ ಸಲ್ಲಿಸಿದರು. ಕುಟುಂಬಸಮೇತರಾಗಿ ಅವರು ವ್ರತ ಶುರು ಮಾಡಿದರು. ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮಗಳನ್ನು ಅನುಸರಿಸುತ್ತಿರುವ ಕುಟುಂಬಕ್ಕೆ ದೇಶದಲ್ಲಿ ಶಾಂತಿ ನೆಲೆಸಬೇಕು ಎಂಬುದು ಸದುದ್ದೇಶವಾಗಿದೆ.

'ಫತ್ವಾ ಹೊರಡಿಸಿದರೂ ಹೆದರಲ್ಲ':ನಾವು ಹಿಂದು ದೇವರು ಮತ್ತು ಅಲ್ಲಾಹುನನ್ನು ಆರಾಧಿಸುತ್ತೇವೆ. ದುರ್ಗಾ ದೇವಿಯನ್ನು ಪೂಜಿಸುವುದನ್ನು ಯಾರಾದರೂ ತಡೆದರೆ ಅಥವಾ ನಮ್ಮ ವಿರುದ್ಧ ಫತ್ವಾ ಹೊರಡಿಸಿದರೆ ನಮಗೆ ಯಾವುದೇ ದೊಡ್ಡ ವ್ಯತ್ಯಾಸವಾಗುವುದಿಲ್ಲ. ನಮ್ಮ ನಂಬಿಕೆ ಮುಂದುವರಿಯುತ್ತದೆ. ದೇವಿಯ ಆರಾಧನೆಯನ್ನು ಮಾಡುತ್ತೇವೆ ಎಂದು ಕುಟುಂಬಸ್ಥರು ಹೇಳಿದರು.

ರೂಬಿ ಅವರು ಬಿಜೆಪಿ ಪಕ್ಷದ ಮಹಿಳಾ ಮೋರ್ಚಾದ ಮಂಡಲ ಉಪಾಧ್ಯಕ್ಷರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಇವರ ಕುಟುಂಬ ಗಣೇಶ ಚತುರ್ಥಿಯಂದು ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದಾರೆ. ನವರಾತ್ರಿಯ ವೇಳೆ ದೇವಿಯನ್ನು ಪ್ರತಿಷ್ಠಾಪಿಸುವ ಮೂಲಕ ಉಪವಾಸ ಆಚರಿಸುತ್ತಾರೆ. ಈ ಬಾರಿಯೂ ಅವರು ಪೂಜೆ ಮುಂದುವರೆಸಿದ್ದಾರೆ. ರೂಬಿ ಅವರ ಪೂಜೆಗೆ ಪತಿ ಆಸಿಫ್ ಅವರ ಬೆಂಬಲವಿದೆ.

ಕುಟುಂಬದ ಮೇಲೆ ದಾಳಿ, ಫತ್ವಾ:ಇಸ್ಲಾಂ ಪದ್ಧತಿಯಲ್ಲಿ ಮೂರ್ತಿ ಮತ್ತು ಏಕದೇವೋಪಾಸನೆ ಇರುವ ಕಾರಣ ರೂಬಿ ಅವರ ಕುಟುಂಬದ ಮೇಲೆ ಹಲವು ಬಾರಿ ದಾಳಿ ಮಾಡಲಾಗಿದೆ. ಜೊತೆಗೆ ಮೌಲಾನಾಗಳು ಫತ್ವಾ ಹೊರಡಿಸಿ, ನಿರ್ಬಂಧಿಸಿದ್ದರು. ಇದ್ಯಾವುದಕ್ಕೂ ಕ್ಯಾರೆ ಎನ್ನದ ಕುಟುಂಬ ತಮ್ಮ ದೈವೋಪಾಸನೆಯನ್ನು ಮುಂದುವರಿಸಿದೆ. ಧರ್ಮಾಂಧರಿಂದ ರೂಬಿ ಅವರ ಕುಟುಂಬಕ್ಕೆ ಬೆದರಿಕೆ ಇರುವ ಕಾರಣ ಪೊಲೀಸ್ ರಕ್ಷಣೆ ನೀಡಲಾಗಿದೆ.

ಇದನ್ನೂ ಓದಿ:ಮೈಸೂರು ದಸರಾ ಕುಸ್ತಿ ಪಂದ್ಯಾವಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

ABOUT THE AUTHOR

...view details