ಪಾಟ್ನಾ(ಬಿಹಾರ):ವಿಶ್ವದ ಅತಿದೊಡ್ಡ ಹಿಂದೂ ದೇಗುಲ ನಿರ್ಮಾಣ ಮಾಡಲು ಮುಸ್ಲಿಂ ಕುಟುಂಬವೊಂದು ದಾಖಲೆಯ 2.5 ಕೋಟಿ ರೂ. ಮೌಲ್ಯದ ಭೂಮಿ ದಾನ ಮಾಡಿದೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ವಿರಾಟ್ ರಾಮಾಯಣ ಮಂದಿರ ನಿರ್ಮಾಣ ಮಾಡಲಾಗ್ತಿದ್ದು, ಅಲ್ಲಿನ ಮುಸ್ಲಿಂ ಕುಟುಂಬ ಈ ನಿರ್ಧಾರ ತೆಗೆದುಕೊಂಡಿದೆ. ಕೈಥ್ವಲಿಯಾದಲ್ಲಿ ವಿಶ್ವದ ಅತಿದೊಡ್ಡ ಹಿಂದೂ ದೇಗುಲ ವಿರಾಟ್ ರಾಮಾಯಣ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಪಾಟ್ನಾ ಮೂಲದ ಮಹಾವೀರ್ ಮಂದಿರ ಟ್ರಸ್ಟ್ ದೇಗುಲ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದೆ. ಇದಕ್ಕಾಗಿ ಉದ್ಯಮಿ ಇಶ್ತಿಯಾಕ್ ಅಹಮದ್ ಖಾನ್ ಭೂದಾನ ಮಾಡಿದ್ದಾರೆಂದು ಟ್ರಸ್ಟ್ ತಿಳಿಸಿದೆ. ಇವರು ಗುವಾಹಟಿಯಲ್ಲಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಕೆಲ ದಿನಗಳ ಹಿಂದೆ ಅಲ್ಲಿನ ಉಪ ವಿಭಾಗದ ರಿಜಿಸ್ಟ್ರಾರ್ ಕಚೇರಿಗೆ ತೆರಳಿ ಎಲ್ಲ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿರುವುದಾಗಿ ಟ್ರಸ್ಟ್ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. ಹಿಂದೂ-ಮುಸ್ಲಿಮರಲ್ಲಿ ಸಾಮರಸ್ಯ ಭಾವನೆ ಮೂಡಿಸುವ ಉದ್ದೇಶದಿಂದ ಇದು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಸ್ಲಿಂ ಕುಟುಂಬದಿಂದ ₹2.5 ಕೋಟಿ ಮೌಲ್ಯದ ಭೂದಾನ ಮುಸ್ಲಿಂ ಕುಟುಂಬದಿಂದ ಸ್ಫೂರ್ತಿ ಪಡೆದ ಅನೇಕರಿಂದ ಭೂದಾನ:ಅಹಮದ್ ಖಾನ್ ಅವರ ಕುಟುಂಬ ಭೂಮಿ ದಾನ ಮಾಡಿರುವುದರಿಂದ ಅನೇಕರು ಸ್ಫೂರ್ತಿಗೊಂಡಿದ್ದಾರೆ. ಪರಿಣಾಮ, ಗ್ರಾಮದ ಇತರೆ ಜನರು ಕೂಡ ಸಬ್ಸಿಡಿ ದರದಲ್ಲಿ ಭೂಮಿ ನೀಡಿದ್ದು, ಇಲ್ಲಿಯವರೆಗೆ 100 ಎಕರೆ ಭೂಮಿ ನಮ್ಮ ಕೈ ಸೇರಿದ್ದು, 25 ಎಕರೆ ಜಮೀನಿಗೋಸ್ಕರ ಕಾಯುತ್ತಿದ್ದೇವೆ. 125 ಎಕರೆ ಜಾಗದಲ್ಲಿ ವಿಶ್ವದ ಅತಿ ಎತ್ತರದ ಹಾಗೂ ದೊಡ್ಡ ದೇವಾಲಯ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
₹2.5 ಕೋಟಿ ಮೌಲ್ಯದ ಭೂಮಿ ದಾನ ಮಾಡಿದ ಮುಸ್ಲಿಂ ಕುಟುಂಬ ಇದನ್ನೂ ಓದಿ:ಮಧ್ಯರಾತ್ರಿ 10 ಕಿಮೀ ಓಡಿಯೇ ಮನೆ ಸೇರುವ ಯುವಕನ ತಾಯಿಗೆ ದೆಹಲಿ ಸರ್ಕಾರದಿಂದ ಉಚಿತ ಚಿಕಿತ್ಸೆ
ದೇಗುಲದ ವಿನ್ಯಾಸ 250 ವರ್ಷಗಳಿಗಿಂತಲೂ ಹೆಚ್ಚು ಬಾಳಿಕೆ ಬರುವ ರೀತಿಯಲ್ಲಿ ಇರಲಿದ್ದು, ಕೇಂದ್ರ ಲೋಕೋಪಯೋಗಿ ಇಲಾಖೆಯ ಮಹಾನಿರ್ದೇಶಕ ಹುದ್ದೆಯಿಂದ ನಿವೃತ್ತರಾಗಿರುವ ಮುಖ್ಯಾಧಿಕಾರಿ ವಿನೀತ್ ಅವರನ್ನು ದೇವಾಲಯ ಯೋಜನೆಯ ಮುಖ್ಯ ಸಲಹೆಗಾರನಾಗಿ ನೇಮಕ ಮಾಡಲಾಗಿದೆ. ವಿರಾಟ್ ರಾಮಾಯಣ ದೇವಾಲಯ 270 ಅಡಿ ಎತ್ತರ ಇರಲಿದ್ದು, ಹಿಂದೂ ದೇವಾಲಯ ದೃಷ್ಟಿಯಿಂದ ಇದು ವಿಶ್ವದ ಅತಿ ದೊಡ್ಡದು ಎನ್ನಲಾಗಿದೆ. ಇದರ ಒಟ್ಟು ಉದ್ದ 1080 ಅಡಿ ಇರಲಿದ್ದು, 540 ಅಗಲ ಇರಲಿದೆ ಎಂದು ತಿಳಿದುಬಂದಿದೆ.