ವಾಷಿಂಗ್ಟನ್:ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಎಲಾನ್ ಮಸ್ಕ್ ಮೈಕ್ರೋಬ್ಲಾಗರ್ ಟ್ವಿಟರ್ ಖರೀದಿಸಿದ ಬಳಿಕ ಒಂದಲ್ಲಾ ಒಂದು ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇದ್ದಾರೆ. ಇದೀಗ ಟ್ವಿಟರ್ನ ಲೋಗೋವನ್ನೇ ಬದಲಿಸಿದ್ದಾರೆ. ನೀಲಿ ಹಕ್ಕಿಯ ಬದಲಾಗಿ "ಡಾಗಿ" (ನಾಯಿಯ ಮುಖ) ಚಿತ್ರವನ್ನು ಹಾಕಿದ್ದು ಕುತೂಹಲ ಮೂಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಲಾನ್ ಮಸ್ಕ್ "ಭರವಸೆ ನೀಡಿದಂತೆ ಮಾಡಿದ್ದೇನೆ" ಎಂದು ಸಾಮಾಜಿಕ ಜಾಲತಾಣದ ಲೋಗೋ ಬದಲಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಟ್ವಿಟರ್ ಖರೀದಿಗೂ ಮುನ್ನ ಬಳಕೆದಾರರ ಜೊತೆ ನಡೆಸಿದ ಸಂಭಾಷಣೆಯ ವೇಳೆ ಮೈಕ್ರೋಬ್ಲಾಗರ್ ಅನ್ನು ಖರೀದಿ ಮಾಡಲು ಬಳಕೆದಾರ ಮಸ್ಕ್ಗೆ ತಿಳಿಸಿದ್ದ. ಬಳಿಕ ಅದರ ಲೋಗೋವನ್ನೂ ಬದಲಿಸಲು ಸಾಧ್ಯವೇ ಎಂದು ಸವಾಲು ಹಾಕಿದ್ದ. ಅದರಂತೆ ಮಸ್ಕ್ ಟ್ವಿಟರ್ ಅನ್ನು ಖರೀದಿ ಮಾಡಿದ್ದು, ಇದೀಗ ಅದರ ಬ್ರ್ಯಾಂಡ್ ಲೋಗೋವನ್ನೂ ಬದಲಿಸಿದ್ದಾರೆ.
ವೆಬ್ನಲ್ಲಿ ಮಾತ್ರ ಗೋಚರ:ಬದಲಾದ ಲೋಗೋವು ಡಾಗ್‌ಕಾಯಿನ್ ಕ್ರಿಪ್ಟೋಕರೆನ್ಸಿಯದ್ದಾಗಿದೆ. ವಿಚಿತ್ರವೆಂದರೆ ಡಾಗಿ ಲೋಗೋ ಟ್ವಿಟರ್ನ ವೆಬ್ನಲ್ಲಿ ಮಾತ್ರ ಗೋಚರಿಸುತ್ತದೆ. ಅದರ ಅಪ್ಲಿಕೇಶನ್‌ನಲ್ಲಿ ಗೋಚರವಾಗುತ್ತಿಲ್ಲ. ಎಲಾನ್ ಮಸ್ಕ್ ಅವರು ಟ್ವಿಟರ್ ಖಾತೆಯ ಮೂಲಕ ಬ್ಲೂ ಬರ್ಡ್‌ನಿಂದ ಡಾಗ್‌ಗೆ ಬದಲಾಗಿರುವುದನ್ನು ಖಚಿತಪಡಿಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ದಾಖಲೆಗಳನ್ನು ಪರಿಶೀಲಿಸುವ ವ್ಯಂಗ್ಯ ಚಿತ್ರವನ್ನು ಮಸ್ಕ್ ಟ್ವೀಟ್ ಮಾಡಿದ್ದು, ನೀಲಿ ಹಕ್ಕಿ ನನ್ನ ಹಳೆಯ ಫೋಟೋ ಎಂದು ಡಾಗ್ ಹೇಳುತ್ತಿರುವ ಮಾದರಿ ಚಿತ್ರಿಸಲಾಗಿದೆ.
ಡಾಗ್‌ಕಾಯಿನ್ ಮೌಲ್ಯ ವೃದ್ಧಿ:ಇನ್ನೊಂದೆಡೆ ಟ್ವಿಟರ್ ತನ್ನ ಮುಖಪುಟದ ಲೋಗೋವನ್ನು ಡಾಗ್ ಚಿತ್ರವನ್ನಾಗಿ ಬದಲಾಯಿಸಿದ ನಂತರ ಡಾಗ್‌ಕಾಯಿನ್‌ನ ಕ್ರಿಪ್ಟೋಕರೆನ್ಸಿ ಮೌಲ್ಯ 30 ಪ್ರತಿಶತ ಹೆಚ್ಚಾಗಿದೆ ಎಂದು ವರದಿಯಾಗಿದೆ.