ನವದೆಹಲಿ: ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿ ಆಯ್ಕೆಯ ಚುನಾವಣೆಗೆ ಒಟ್ಟಾರೆ 94 ಜನರಿಂದ 115 ನಾಮಪತ್ರ ಸಲ್ಲಿಕೆಯಾಗಿದೆ. ಆದರೆ, ಅಂತಿಮ ಕಣದಲ್ಲಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಮಾತ್ರವೇ ಉಳಿದಿದ್ಧಾರೆ.
ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿತ್ತು. ಪ್ರಮುಖ ಅಭ್ಯರ್ಥಿಗಳಾದ ದ್ರೌಪದಿ ಮುರ್ಮು ಹಾಗೂ ಯಶವಂತ್ ಸಿನ್ಹಾ ಸೇರಿದಂತೆ ಒಟ್ಟು 94 ಜನರಿಂದ 115 ನಾಮಪತ್ರಗಳು ಬುಧವಾರದವರೆಗೆ ಸಲ್ಲಿಕೆಯಾಗಿದ್ದವು. ಗುರುವಾರ ಈ ನಾಮಪತ್ರಗಳ ಪರಿಶೀಲನೆ ನಡೆಸಲಾಗಿದೆ. ಅಗತ್ಯವಾದ ಮಾನದಂಡಗಳನ್ನು ಪಾಲಿಸದ 107 ನಾಮಪತ್ರಗಳ ತಿರಸ್ಕಾರ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳಾದ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿ.ಸಿ.ಮೋಡಿ ತಿಳಿಸಿದರು.
ದ್ರೌಪದಿ ಮುರ್ಮು ಹಾಗೂ ಯಶವಂತ್ ಸಿನ್ಹಾ ಅವರೇ ತಲಾ ನಾಲ್ಕು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಇವರ ನಾಮಪತ್ರಗಳಲ್ಲಿ ಅಗತ್ಯವಾದ ಮಾನದಂಡಗಳನ್ನು ಪಾಲಿಸಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಕ್ರಮಬದ್ಧ ಎಂದು ಘೋಷಿಸಲಾಗಿದೆ. ಜುಲೈ 12ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ಅಂದು ಮಧ್ಯಾಹ್ನ 3 ಗಂಟೆ ನಂತರ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಹೆಸರನ್ನು ಗೆಜೆಟ್ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಅವರು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಮುರ್ಮು ಹಾಗೂ ಸಿನ್ಹಾ ಜೊತೆಗೆ ಜನಸಾಮಾನ್ಯರು ಕೂಡ ನಾಮಪತ್ರ ಸಲ್ಲಿಸಿದ್ದರು. ಮುಂಬೈನ ಕೊಳೆಗೇರಿ ನಿವಾಸಿ, ಬಿಹಾರದ ಸರನ್ ಜಿಲ್ಲೆಯ ನಿವಾಸಿ ಲಾಲು ಪ್ರಸಾದ್ ಯಾದವ್, (ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅಲ್ಲ), ತಮಿಳುನಾಡಿನ ಸಾಮಾಜಿಕ ಕಾರ್ಯಕರ್ತ ಹಾಗೂ ದೆಹಲಿಯ ಒಬ್ಬ ಪ್ರೊಫೆಸರ್ ಕೂಡ ನಾಮಪತ್ರ ಸಲ್ಲಿಕೆ ಮಾಡಿದ್ದರು.