ತೂತುಕುಡಿ (ತಮಿಳುನಾಡು) : ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಕೊಲೆ ಆರೋಪಿಯ ಕಾಲಿಗೆ ತಮಿಳುನಾಡು ಪೊಲೀಸರು ಭಾನುವಾರ ಗುಂಡು ಹಾರಿಸಿ ಬಂಧಿಸಿದ್ದಾರೆ. 2019 ರಲ್ಲಿ ಮೃತನ ಸಹೋದರನ ಹತ್ಯೆಗೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಇಬ್ಬರು ಆರೋಪಿಗಳ ಜಾಮೀನು ಅರ್ಜಿಯನ್ನು ವಿರೋಧಿಸಿದ್ದಕ್ಕಾಗಿ ಜಯಪ್ರಕಾಶ್ ಮತ್ತು ಇತರ ಆರು ಮಂದಿ ಆರೋಪಿಗಳು ಫೆಬ್ರವರಿ 22 ರಂದು ಮುತ್ತುಕುಮಾರ್ ಎಂಬ ವಕೀಲರನ್ನು ಕೊಲೆ ಮಾಡಿದ್ದರು ಎಂದು ವರದಿಯಾಗಿದೆ.
ಹತ್ಯೆ ತನಿಖೆಗೆ ಆರು ವಿಶೇಷ ತಂಡ ರಚನೆ :ಮೃತ ವಕೀಲ (ಮುತ್ತುಕುಮಾರ್) ಅವರು ತಮಿಳುನಾಡಿನ ತೂತುಕುಡಿ ಜಿಲ್ಲೆಯ ಅಯ್ಯನಡೈಪ್ಪು ಗ್ರಾಮದಲ್ಲಿ ವಾಸಿಸುತ್ತಿದ್ದರು. ಜಿಲ್ಲಾಧಿಕಾರಿ ಕಚೇರಿ ಬಳಿ ಆಭರಣ ಮಳಿಗೆಯನ್ನೂ ಸಹ ಅವರು ನಡೆಸುತ್ತಿದ್ದರು. ಕಳೆದ ತಿಂಗಳು ಅವರು ಅಂಗಡಿಯಲ್ಲಿ ಕುಳಿತಿದ್ದಾಗ ಏಳು ಜನರ ತಂಡ ದಾಳಿ ನಡೆಸಿತ್ತು. ಆ ವೇಳೆ ಮೃತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೂತುಕುಡಿ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಹತ್ಯೆಯ ತನಿಖೆಗಾಗಿ ಆರು ವಿಶೇಷ ತಂಡಗಳನ್ನು ರಚಿಸಿತ್ತು.
ತನಿಖೆಯ ಸಮಯದಲ್ಲಿ ಮೃತ (ಮುತ್ತುಕುಮಾರ್) ನ ಕಿರಿಯ ಸಹೋದರ ಶಿವಕುಮಾರ್ ಅವರನ್ನು 2019 ರಲ್ಲಿ ರಾಜೇಶ್ ಮತ್ತು ಪೀಟರ್ ಎಂಬ ಆರೋಪಿಗಳು ಕೊಲೆ ಮಾಡಿದ್ದಾರೆ ಎಂಬುದನ್ನು ಪೊಲೀಸರು ಕಂಡುಕೊಂಡರು. ಘಟನೆ ಬಳಿಕ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ರಾಜೇಶ್ ಜಾಮೀನು ಪಡೆಯಲು ಹಲವು ಬಾರಿ ಪ್ರಯತ್ನಿಸಿದ್ದರು. ಆದರೆ ಮೃತ ವಕೀಲ ಮುತ್ತುಕುಮಾರ್ ಜಾಮೀನು ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ, ಮೃತ ವಕೀಲರ ಹತ್ಯೆಯಲ್ಲಿ ಪೀಟರ್ ಹಾಗೂ ರಾಜೇಶ್ ಕೈವಾಡವಿದೆಯೇ? ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರಾಜೇಶ್ ಮತ್ತು ಪೀಟರ್ ಜಾಮೀನನ್ನು ವಿರೋಧಿಸಿದ್ದಕ್ಕಾಗಿ ಕೋಪದಿಂದ ಮತ್ತು ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಗ್ಯಾಂಗ್ ವಕೀಲನನ್ನು ಕೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.