ಅಮರಾವತಿ(ಮಹಾರಾಷ್ಟ್ರ): ಪ್ರವಾದಿ ಮುಹಮ್ಮದ್ ಕುರಿತು ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಂದು ಭೀಕರ ಹತ್ಯೆಯಾಗಿದೆ. ನಗರದಲ್ಲಿ ಮೆಡಿಕಲ್ ಶಾಪ್ ಮಾಲೀಕನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರಾಜಸ್ಥಾನದ ಟೈಲರ್ ಕನ್ಹಯ್ಯ ಲಾಲ್ ಶಿರಚ್ಛೇದದ ರೀತಿಯಲ್ಲೇ ಈ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ.
ಜೂನ್ 21ರ ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಹೈಸ್ಕೂಲ್ ಎದುರು ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಆರು ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆ ಹಿನ್ನೆಲೆ: ನಗರದ ಮೆಡಿಕಲ್ ಶಾಪ್ ಮಾಲೀಕ ಉಮೇಶ್ ಕೊಲ್ಹೆ ಕೆಲಸ ಮುಗಿಸಿ ಮೆಡಿಕಲ್ ಸ್ಟೋರ್ ಮುಚ್ಚಿ ಮನೆಗೆ ಹೊರಟಿದ್ದರು. ಇನ್ನೊಂದು ಬೈಕ್‌ನಲ್ಲಿ ಮಗ ಮತ್ತು ಸೊಸೆ ಜೊತೆಗಿದ್ದರು. ಮೂವರಿಗೂ ಚಾಕುವಿನಿಂದ ಇರಿಯಲಾಗಿದ್ದು, ಉಮೇಶ್ ಕೊಲ್ಹೆ ಪ್ರಾಣಬಿಟ್ಟಿದ್ದಾರೆ. ಉಮೇಶ್ ಅವರನ್ನು ಬೆಲ್ ಕ್ಲಾಕ್ ಪ್ರದೇಶದ ಬಳಿ ನಾಲ್ಕೈದು ಜನರು ಇರಿದು ಕೊಂದಿದ್ದಾರೆ. ಪ್ರಕರಣ ಸಂಬಂಧ ಮೌಲಾನಾ ಆಜಾದ್ ಕಾಲೋನಿಯ ಅತೀಫ್ ರಶೀದ್ ಆದಿಲ್ ರಶೀದ್ (24), ಬಿಸ್ಮಿಲ್ಲಾನಗರದ ಮುದಾಸ್ಸಿರ್ ಅಹ್ಮದ್ ಶೇಖ್ ಇಬ್ರಾಹಿಂ (22), ಸೂಫಿಯಾನಗರದ ಶಾರುಖ್ ಪಠಾಣ್ ಹಿದಾಯತ್ ಖಾನ್ (24), ಅಬ್ದುಲ್ ತೌಫಿಕ್ ಅಲಿಯಾಸ್ ನಾಣು ಶೇಖ್ ತಸ್ಲೀಂ (24) ಮತ್ತು ಬುರ್ಯಾ ವಾಲ್ದ್ ಸಬೀರ್ ಖಾನ್(22) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಹತ್ಯೆ ಪ್ರಕರಣ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ವಿವಾದಿತ ಹೇಳಿಕೆ ಬೆಂಬಲಿಸಿದ್ದಕ್ಕೆ ನಡೆದಿದ್ದು, ಎನ್‌ಐಎ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಶಿವರಾಯ್ ಕುಲಕರ್ಣಿ ಆಗ್ರಹಿಸಿದ್ದಾರೆ. ಇವರು ಹಲವು ಪ್ರಶ್ನೆಗಳನ್ನು ಎತ್ತಿದ್ದು, ಕೊಲೆ ಬಗ್ಗೆ ಗಂಭೀರ ತನಿಖೆಯಾಗಬೇಕು ಎಂದಿದ್ದಾರೆ.