ಖೇಡಾ(ಗುಜರಾತ್): ಮಗಳ ವಿಡಿಯೋ ವೈರಲ್ ಮಾಡಿರುವ ಬಗ್ಗೆ ಮಾತನಾಡಲು ಹೋಗಿದ್ದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಗುಜರಾತಿನ ಖೇಡಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಸಾರ್ವಜನಿಕವಾಗಿಯೇ ನಡೆದ ಘೋರ ಪ್ರಕರಣ ಸಂಚಲನ ಉಂಟುಮಾಡಿದೆ.
ನಡಿಯಾಡ್‌ನ ಚಕ್ಲಾಸಿ ಪೊಲೀಸ್ ಠಾಣೆ ವ್ಯಾಪ್ತಿಯ ಸೂರ್ಯನಗರದಲ್ಲಿ ವಾಸಿಸುತ್ತಿರುವ ಬಿಎಸ್‌ಎಫ್ ಯೋಧ ಮೆಲ್ಜಿಭಾಯ್ ದಹ್ಯಾಭಾಯಿ ಅವರು ತಮ್ಮ ಮಗಳ ವಿಡಿಯೋವನ್ನು ವೈರಲ್ ಮಾಡಿದ ಯುವಕನನ್ನು ಪ್ರಶ್ನಿಸಲು ಅವರ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಿದೆ. ನಂತರ ಸ್ಥಳದಲ್ಲಿದ್ದ ಏಳು ಮಂದಿ ಸೇರಿ ಯೋಧನ ಮೇಲೆ ಹರಿತ ಆಯುಧಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ಮೂಲಗಳ ಮಾಹಿತಿ ಪ್ರಕಾರ, ವಾಣಿಪುರ ಗ್ರಾಮದ ಶೈಲೇಶ್ ಅಲಿಯಾಸ್ ಸುನೀಲ್ ದಿನೇಶ್ ಭಾಯ್ ಜಾದವ್ ಎಂಬಾತ ಮೆಲ್ಜಿಭಾಯಿ ಅವರ ಮಗಳ ವಿಡಿಯೋವನ್ನು ಕೆಲ ದಿನಗಳ ಹಿಂದೆ ವೈರಲ್ ಮಾಡಿದ್ದಾನೆ. ಯೋಧನ ಪತ್ನಿ, ಮಗ ಮತ್ತು ಸೋದರಳಿಯ ಶನಿವಾರ ರಾತ್ರಿ ಶೈಲೇಶ್ ಮನೆಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಶೈಲೇಶ್ ಇರಲಿಲ್ಲ. ಆದರೂ ಅಲ್ಲಿದ್ದವರ ಜೊತೆ ಜಗಳ ವಿಕೋಪಕ್ಕೆ ತಿರುಗಿತ್ತು. ಶೈಲೇಶ್‌ನ ತಂದೆ, ಚಿಕ್ಕಪ್ಪ ಹಾಗು ತಾತ ಸೇರಿದಂತೆ ಕುಟುಂಬದ ಸದಸ್ಯರು ಯೋಧ ಮತ್ತು ಆತನ ಮಗನ ಮೇಲೆ ದೊಣ್ಣೆ, ಚಾಕು ಮತ್ತು ಸಲಕೆಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅವರ ಪುತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.