ವಿಜಯವಾಡ( ಆಂಧ್ರಪ್ರದೇಶ):ತಂಬಳ್ಳಪಲ್ಲೆ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ರಾಷ್ಟ್ರೀಯ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಮತ್ತು ಪಕ್ಷದ ಇತರ 20 ಮುಖಂಡರ ವಿರುದ್ಧ ಕೊಲೆ ಯತ್ನ, ಗಲಭೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ವೈಎಸ್‌ಆರ್‌ಸಿಪಿ ಮುಖಂಡ ಉಮಾಪತಿ ರೆಡ್ಡಿ ಎಂಬುವವರು ನೀಡಿದ ದೂರಿನ ಮೇರೆಗೆ ಮುದವೀಡು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಚಂದ್ರಬಾಬು ನಾಯ್ಡು ಅವರನ್ನು ನಂಬರ್ ಒನ್ ಆರೋಪಿ ಎಂದು ಹೆಸರಿಸಲಾಗಿದೆ. ಇವರೊಂದಿಗೆ ಮಾಜಿ ಸಚಿವೆ ದೇವಿನೇನಿ ಉಮಾ, ಹಿರಿಯ ಮುಖಂಡ ಅಮರನಾಥ ರೆಡ್ಡಿ, ಎಂಎಲ್ಸಿ ಭೂಮಿರೆಡ್ಡಿ, ರಾಮಗೋಪಾಲ್ ರೆಡ್ಡಿ, ನಲ್ಲಾರಿ ಕಿಶೋರ್, ಡಿ.ರಮೇಶ್, ಜಿ.ನರಹರಿ, ಎಸ್.ಚಿನ್ನಬಾಬು, ಪಿ.ನಾನಿ ಮತ್ತಿತರರನ್ನು ಆರೋಪಿಗಳು ಎಂದು ಹೆಸರಿಸಲಾಗಿದೆ. ಆ.4ರಂದು ಡಿಪಿ ಮುಖಂಡರು ಮಾರಕಾಸ್ತ್ರಗಳಿಂದ ಜನರನ್ನು ಭಯಭೀತಗೊಳಿಸಿದ್ದಾರೆ ಎಂದು ಉಮಾಪತಿ ರೆಡ್ಡಿ ದೂರಿನಲ್ಲಿ ಆರೋಪಿಸಿದ್ದಾರೆ.
ಟಿಡಿಪಿ ನಾಯಕರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), 147 (ಗಲಭೆ), 148 (ಶಸ್ತ್ರಸಜ್ಜಿತ ದಾಳಿ), 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು)ರ ಅಡಿ ಪ್ರಕರಣ ದಾಖಲಿಸಲಾಗಿದೆ. ಆ. 4 ರಂದು ರಾಯಲಸೀಮಾ ಭಾಗದ ನೀರಾವರಿ ಯೋಜನೆಗಳ ಸ್ಥಿತಿಗತಿ ಪರಿಶೀಲನೆಗಾಗಿ ಚಂದ್ರಬಾಬು ನಾಯ್ಡು ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿಲ್ಲೆಯ ಅಂಗಲ್ಲು ಪಟ್ಟಣದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಕಾರ್ಯಕರ್ತರು ಟಿಡಿಪಿಯ ಫ್ಲೆಕ್ಸ್, ಬ್ಯಾನರ್‌ಗಳನ್ನು ಹರಿದು ಹಾಕಿದ್ದರು. ಅಲ್ಲದೇ ನಾಯ್ಡು ಅವರ ಭೇಟಿಯನ್ನು ವಿರೋಧಿಸಿ ರ‍್ಯಾಲಿ ನಡೆಸಿದರು ಎಂದು ಆರೋಪಿಸಿ ಘರ್ಷಣೆ ನಡೆದಿತ್ತು.
ವೈಎಸ್‌ಆರ್‌ಸಿಪಿ ಕಾರ್ಯಕರ್ತರು ನಾಯ್ಡು ಅವರ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದರು ಎಂದು ಆರೋಪಿಸಿ, ಎನ್‌ಎಸ್‌ಜಿ ಕಮಾಂಡೋಗಳು ಝಡ್ ಪ್ಲಸ್ ಕೆಟಗರಿ ಭದ್ರತೆ ಹೊಂದಿರುವ ಮಾಜಿ ಮುಖ್ಯಮಂತ್ರಿಯನ್ನು ರಕ್ಷಿಸಲು ಮುಂದಾದರು. ಪಕ್ಕದ ಚಿತ್ತೂರು ಜಿಲ್ಲೆಯ ಪುಂಗನೂರಿನಲ್ಲಿ ಟಿಡಿಪಿ ಕಾರ್ಯಕರ್ತರನ್ನು ಅನುಮತಿಯಿಲ್ಲದೇ ಪಟ್ಟಣಕ್ಕೆ ಪ್ರವೇಶಿಸದಂತೆ ಪೊಲೀಸರು ತಡೆದಿದ್ದು, ನಂತರ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು.