ಮುನುಗೋಡು(ತೆಲಂಗಾಣ):ಮುನುಗೋಡು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೋಮಟಿ ರಾಜಗೋಪಾಲ್ ರೆಡ್ಡಿ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಇದೀಗ ಉಪ ಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಶಕ್ತಿ ಪ್ರದರ್ಶನ ನಡೆಸಿದರು. ಮುನುಗೋಡಿನಲ್ಲಿ ಆಯೋಜನೆಗೊಂಡಿದ್ದ ಟಿಆರ್ಎಸ್ ಪ್ರಜಾದೀಪ್ ಸಮಾವೇಶದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಭಾಷಣದ ಉದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೆಸಿಆರ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ರೋಶ ಹೊರಹಾಕಿದರು. ತೆಲಂಗಾಣ ವಿಚಾರದಲ್ಲಿ ಕೇಂದ್ರ ಇಬ್ಬಗೆಯ ನೀತಿ ಅನುಸರಿಸುತ್ತಿದೆ. ಕೃಷ್ಣಾ ನದಿ ನೀರಿನ ಹಂಚಿಕೆ ಅಂತಿಮಗೊಂಡಿಲ್ಲ. ಇದರ ಬಗ್ಗೆ ಮನುಗೋಡಿನಲ್ಲಿ ನಡೆಯಲಿರುವ ನಾಳೆಯ ಸಭೆಯಲ್ಲಿ ಅಮಿತ್ ಶಾ ಉತ್ತರ ನೀಡಲಿ ಎಂದು ಆಗ್ರಹಿಸಿದರು. ಈ ಹಿಂದೆ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಬಿಜೆಪಿ ಠೇವಣಿ ಕಳೆದುಕೊಂಡಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೃಷಿ ಪಪ್ಸೆಟ್ಗಳಿಗೆ ವಿದ್ಯುತ್ ಮೀಟರ್ ಅಳವಡಿಕೆ ಮಾಡುತ್ತೇವೆ ಎನ್ನುತ್ತಾರೆ. ಇದರಿಂದ ರೈತರ ಹೊಟ್ಟೆ ಮೇಲೆ ಹೊಡೆಯಲು ಮುಂದಾಗಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಗುಡುಗಿದರು. ಮುನುಗೋಡಿನಲ್ಲಿ ನಡೆಯುತ್ತಿರುವ ಉಪ ಚುನಾವಣೆ ರಾಜಕೀಯ ಪಕ್ಷಗಳ ಚುನಾವಣೆಯಲ್ಲ. ಇದು ರೈತರ ಜೀವನೋಪಾಯದ ಚುನಾವಣೆ. ರೈತ ವಿರೋಧಿ ನೀತಿ, ಕೃಷಿ ಮೋಟಾರ್ಗಳಿಗೆ ಮೀಟರ್ ಅಳವಡಿಸಲು ಮುಂದಾಗಿರುವ ಬಿಜೆಪಿಗೆ ಮತ ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೆಸಿಆರ್ ಪ್ರಶ್ನಿಸಿದರು.