ನವದೆಹಲಿ:ದೆಹಲಿ ಮಹಾನಗರ ಪಾಲಿಕೆಯಲ್ಲಿ 15 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಬಿಜೆಪಿಯನ್ನು ಹಿಮ್ಮೆಟ್ಟಿಸಿದ ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಗೆದ್ದು ಗದ್ದುಗೆ ಏರಿದೆ. 250 ಸ್ಥಾನಗಳ ಮತ ಎಣಿಕೆಯಲ್ಲಿ ಆಪ್ 126 ಸ್ಥಾನಗಳನ್ನು ಜಯಿಸಿದ್ದು, ಮ್ಯಾಜಿಕ್ ನಂಬರ್ಗೆ ಬೇಕಾದ ಸ್ಥಾನಗಳನ್ನು ಸಂಪಾದಿಸಿದೆ. ಇನ್ನೂ 8 ಸ್ಥಾನಗಳಲ್ಲಿ ಮುನ್ನಡೆ ಹೊಂದಿದೆ.
ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ನಡೆಸುತ್ತಿರುವ ಆಪ್ ಇದೀಗ ಪಾಲಿಕೆಯಲ್ಲೂ ಅಧಿಕಾರ ಸ್ಥಾಪಿಸಿದೆ. ಈ ಗೆಲುವಿನ ಮೂಲಕ ಕಾರ್ಯಕರ್ತರು ದೆಹಲಿಯಾದ್ಯಂತ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಸದ್ಯ ಆಪ್ 134 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 104 ರಲ್ಲಿ ವಿಜಯ ಪಡೆದಿದೆ. ಕಾಂಗ್ರೆಸ್ 9 ಹಾಗೂ ಇತರರು 3ರರಲ್ಲಿ ಗೆಲುವು ಸಾಧಿಸಿದ್ದಾರೆ. ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಪಾಲಿಕೆ ಚುನಾವಣೆಯಲ್ಲಿ ಆಪ್ 140 ರಿಂದ 150 ಕ್ಕೂ ಅಧಿಕ ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ, 130 ಸ್ಥಾನಗಳಲ್ಲಿ ಆಪ್ ಗೆಲ್ಲುವ ಸಾಧ್ಯತೆ ಇದೆ. ಅಧಿಕಾರದಲ್ಲಿದ್ದ ಬಿಜೆಪಿಯನ್ನು ಮತದಾರರು ಮತ್ತೊಮ್ಮೆ ಕೈಬಿಟ್ಟಿದ್ದು, ರಾಷ್ಟ್ರ ರಾಜಧಾನಿಯಲ್ಲೇ ಬಿಜೆಪಿ ತೀವ್ರ ಹಿನ್ನಡೆ ಉಂಟು ಮಾಡಿದೆ.