ಮುಂಬೈ:57 ವರ್ಷಗಳ ಇತಿಹಾಸ. 34 ಕೆಜಿ ಬಂಗಾರ. 7.80 ಕೋಟಿ ರೂಪಾಯಿ ವಿಮೆ. ದರ್ಶನಕ್ಕೆ ಬರುವ ಭಕ್ತರು ತುಂಡುಡುಗೆ ಧರಿಸುವಂತಿಲ್ಲ. 250 ಕ್ಕೂ ಹೆಚ್ಚು ಸ್ವಯಂ ಸೇವಕರಿಂದ ನಿರ್ಮಿಸಲಾದ ವಡೋದರದ ಲಕ್ಷ್ಮಿ ವಿಲಾಸ ಅರಮನೆ ಮಾದರಿ. ಇದಿಷ್ಟು ಇಲ್ಲಿನ ಅಂಧೇರಿಯಲ್ಲಿ ಪ್ರತಿಷ್ಠಾಪಿಸಲಾದ ರಾಜ ಗಣಪತಿಯ ವಿಶೇಷತೆಗಳು.
ಮುಂಬೈನ ಅಂಧೇರಿಯಲ್ಲಿ 57 ವರ್ಷಗಳಿಂದ ಪ್ರತಿಷ್ಠಾಪಿಸಲಾಗುವ ರಾಜ ಗಣಪತಿ ಈ ಸಲದ ಸಿರಿವಂತ ವಿನಾಯಕ ಎಂದೇ ಹೇಳಬಹುದು. ಈ ವಿನಾಯಕನಿಗೆ ಬರೋಬ್ಬರಿ 34 ಕೆಜಿ ಚಿನ್ನವನ್ನು ತೊಡಿಸಲಾಗಿದೆ. ವಡೋದರದಲ್ಲಿರುವ ಲಕ್ಷ್ಮಿ ವಿಲಾಸ ಅರಮನೆ ಮಾದರಿಯಲ್ಲಿ ನಿರ್ಮಿಸಲಾಗಿರುವ ಪೆಂಡಾಲ್ನಲ್ಲಿ ರಾಜ ಗಣಪತಿ ಮೆರೆಯುತ್ತಿದ್ದಾನೆ.
ಭಾರೀ ಮೆಚ್ಚುಗೆ ಪಡೆದ ಈ ವಿನಾಯಕನ ದರ್ಶನ ಪಡೆಯಲು ಜನರು ತಂಡೋಪತಂಡವಾಗಿ ಬರುತ್ತಿದ್ದು, ಭಾರೀ ಮೊತ್ತದ ಚಿನ್ನವನ್ನು ತೊಡಿಸಿದ ಕಾರಣ 7.80 ಕೋಟಿ ರೂಪಾಯಿ ವಿಮೆ ಮಾಡಿಸಲಾಗಿದೆ. ಅಲ್ಲದೇ, ಇಲ್ಲಿನ ಗಣಪನಿಗಾಗಿ 250 ಕ್ಕೂ ಅಧಿಕ ಸ್ವಯಂಸೇವಕರು ಭದ್ರತೆ ನೀಡುತ್ತಿದ್ದಾರೆ.
14 ದಿನಗಳ ಕಾಲ ನಡೆಯುವ ಪೂಜೆಯಲ್ಲಿ ಭಾಗವಹಿಸುವ ಮಹಿಳೆ ಮತ್ತು ಪುರುಷ ಭಕ್ತರು ದರ್ಶನಕ್ಕೆ ಬಂದಾಗ ತುಂಡುಡುಗೆಯನ್ನು ಧರಿಸುವಂತಿಲ್ಲ ಎಂದು ಗಣೇಶ ಪ್ರತಿಷ್ಠಾಪನಾ ಮಂಡಳಿ ನಿಯಮ ಹಾಕಿದೆ. ಅಂದಹಾಗೆ ರಾಜ ಗಣಪನಿಗೆ ಹಾಕಿರುವ 34 ಕೆಜಿ ಚಿನ್ನದೊಡವೆ ಭಕ್ತರೊಬ್ಬರು ನೀಡಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಓದಿ:ಬೆಂಗಳೂರಿನಲ್ಲಿ 1.59 ಲಕ್ಷ ಗಣೇಶ ಮೂರ್ತಿಗಳ ವಿಸರ್ಜನೆ