ಮುಂಬೈ : ಕಳೆದ ವರ್ಷ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಮಹಾರಾಷ್ಟ್ರದಲ್ಲಿ ಕೂಡ ಅಂತಹದೇ ಘಟನೆ ಮರುಕಳಿಸಿದೆ. ಬುಧವಾರ ರಾತ್ರಿ ಥಾಣೆ ಜಿಲ್ಲೆಯ ಮೀರಾ ಭಾಯಂದರ್ ಪ್ರದೇಶದಲ್ಲಿನ ಕಟ್ಟಡವೊಂದರ ಏಳನೇ ಮಹಡಿಯಲ್ಲಿರುವ ಫ್ಲಾಟ್‌ನಲ್ಲಿ ಹಲವಾರು ತುಂಡುಗಳಾಗಿ ಕತ್ತರಿಸಿದ 36 ವರ್ಷದ ಮಹಿಳೆಯ ಶವವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಸರಸ್ವತಿ ವೈದ್ಯ ಕೊಲೆಯಾದ ಮಹಿಳೆ ಎಂದು ಪೊಲೀಸರು ಗುರುತಿಸಿದ್ದಾರೆ. ಮೃತರು 56 ವರ್ಷದ ಮನೋಜ್ ಸಹಾನಿ ಅವರೊಂದಿಗೆ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದು, ಕಳೆದ ಮೂರು ವರ್ಷಗಳಿಂದ ಮೀರಾ ಭಾಯಂದರ್ ಪ್ರದೇಶದ ಫ್ಲಾಟ್‌ನಲ್ಲಿ ನೆಲೆಸಿದ್ದರು. ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಅಪಾರ್ಟ್‌ಮೆಂಟ್‌ನಲ್ಲಿದ್ದ ನೆರೆಹೊರೆಯವರು ನಯಾ ನಗರ ಠಾಣೆಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"3, 4 ದಿನಗಳ ಹಿಂದೆ ಸರಸ್ವತಿಯನ್ನು ಕೊಂದಿದ್ದ ಆರೋಪಿ ಮನೋಜ್, ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಲು ಮರ ಕಡಿಯುವ ಯಂತ್ರವನ್ನು ಖರೀದಿಸಿದ್ದಾನೆ. ಬಳಿಕ, ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿ, ಹೊರಗೆ ಎಸೆಯುವ ಉದ್ದೇಶದಿಂದ ಪ್ಲಾಸ್ಟಿಕ್ ಚೀಲಗಳಲ್ಲಿ ಸುತ್ತಿ ಇಟ್ಟಿದ್ದ. ಮಹಿಳೆಯ ಮೃತ ದೇಹದ 12-13 ತುಂಡುಗಳು ಸ್ಥಳದಿಂದ ಪತ್ತೆಯಾಗಿವೆ" ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ :Delhi Murder: ಬಾಲಕಿಯನ್ನು 21 ಬಾರಿ ಚಾಕುವಿನಿಂದ ಇರಿದು ಹತ್ಯೆ.. ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆ
"ಸ್ಥಳೀಯರು ದೂರು ನೀಡುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ತಂಡವನ್ನು ಕಳುಹಿಸಲಾಯಿತು. ಈ ವೇಳೆ, ಮಹಿಳೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿರುವುದು ಕಂಡು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಶಂಕಿತ ವ್ಯಕ್ತಿಯೊಬ್ಬ ಗಲಾಟೆ ಮಾಡಿಕೊಂಡು ಆಕೆಯನ್ನು ಕೊಲೆ ಮಾಡಿದ್ದಾನೆ ಮತ್ತು ಇನ್ನೊಬ್ಬ ಬುಧವಾರ ಸಂಜೆಯವರೆಗೂ ಆಕೆಯ ಮೃತದೇಹವನ್ನು ಮುಚ್ಚಿಡಲು ಸಹಾಯ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಆದರೆ, ಕೊಲೆ ಏಕೆ ಮಾಡಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ" ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.