ಮುಂಬೈ:ಮಹಾರಾಷ್ಟ್ರದಲ್ಲಿ ಕೊರೊನಾ ಅಬ್ಬರಿಸುತ್ತಿದ್ದು, ಮುಂಬೈನ ಶಾಲಾ ಶಿಕ್ಷಕರೊಬ್ಬರು ತಾವೇ ಆಟೋ ರಿಕ್ಷಾ ಓಡಿಸಿ, ಕೋವಿಡ್ ರೋಗಿಗಳನ್ನು ಮನೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಮನೆಗೆ ಉಚಿತವಾಗಿ ಕರೆದುಕೊಂಡು ಹೋಗುತ್ತಿದ್ದಾರೆ.
ಮುಂಬೈನ ಜ್ಞಾನ ಸಾಗರ್ ವಿದ್ಯಾಮಂದಿರ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿರುವ ದತ್ತಾತ್ರೇಯ ಸಾವಂತ್ ಅವರು ಇಲ್ಲಿಯವರೆಗೆ 26 ಕೊರೊನಾ ರೋಗಿಗಳಿಗೆ ಉಚಿತ ಸೇವೆ ಒದಗಿಸಿದ್ದಾರೆ. ಪಿಪಿಇ ಕಿಟ್ ಧರಿಸಿ, ಆಟೋ ಸ್ಯಾನಿಟೈಸ್ ಮಾಡಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಾವಂತ್ ಈ ಕಾರ್ಯ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಿಡಿದ ಹೃದಯ: ಹೆಂಡತಿ ಒಡವೆ ಮಾರಿ ಆಟೋವನ್ನೇ ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿದ ವ್ಯಕ್ತಿ
"ನಗರದಲ್ಲಿ ಕೋವಿಡ್ ಕೇಸ್ಗಳು ಹೆಚ್ಚುತ್ತಿವೆ. ಬಡ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಸರ್ಕಾರಿ ಆ್ಯಂಬುಲೆನ್ಸ್ಗಳು ಸಿಗುವುದಿಲ್ಲ. ಖಾಸಗಿ ಆಂಬ್ಯುಲೆನ್ಸ್‌ಗಳು ಹೆಚ್ಚಿನ ಹಣ ಕೇಳುತ್ತವೆ. ಹೀಗಾಗಿ ನಾನು ಕೋವಿಡ್ ಕೇರ್ ಸೆಂಟರ್ ಮತ್ತು ಆಸ್ಪತ್ರೆಗೆ ರೋಗಿಗಳನ್ನು ಬಿಡುತ್ತೇನೆ. ಆಸ್ಪತ್ರೆಯಿಂದ ಬಿಡುಗಡೆಯಾದವರನ್ನು ಅವರ ಮನೆಗೆ ಕರೆದೊಯ್ಯುತ್ತೇನೆ" ಎಂದು ಹೇಳುತ್ತಾರೆ ದತ್ತಾತ್ರೇಯ ಸಾವಂತ್.
ಕೊರೊನಾ ಎರಡನೇ ಅಲೆ ಅಂತ್ಯವಾಗುವವರೆಗೂ ತಮ್ಮ ಸೇವೆ ಮುಂದುವರೆಸುವುದಾಗಿ ಸಾವಂತ್ ಹೇಳಿದ್ದಾರೆ. ಇವರ ಸೇವೆಯನ್ನು ಗುರುತಿಸಿರುವ ಅನೇಕರು ಇವರಿಗೆ ಆರ್ಥಿಕ ಸಹಾಯ ನೀಡುದ್ದು, ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯವು ಆಟೋ ರಿಕ್ಷಾದ ಇಂಧನದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ತಿಳಿಸಿದೆ.