ಮುಂಬೈ (ಮಹಾರಾಷ್ಟ್ರ):ಮಹಾರಾಷ್ಟ್ರ ರಾಜಧಾನಿ ಮುಂಬೈ ವಿಮಾನ ನಿಲ್ದಾಣದಲ್ಲಿ ಭಾರಿ ದುರಂತವೊಂದು ತಪ್ಪಿದೆ. ಖಾಸಗಿ ಲಘು ವಿಮಾನವೊಂದು ಲ್ಯಾಂಡಿಂಗ್ ಮೇಲೆ ರನ್ವೇಯಲ್ಲಿ ಜಾರಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಮಾನದಲ್ಲಿದ್ದ ಸಿಬ್ಬಂದಿ ಸೇರಿ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
ವಿಎಸ್ಆರ್ ವೆಂಚರ್ಸ್ ಸಂಸ್ಥೆಗೆ ಸೇರಿದ ಲಿಯರ್ಜೆಟ್ 45 ವಿಮಾನ ವಿಟಿ-ಡಿಬಿಎಲ್ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಿಂದ ಮುಂಬೈಗೆ ಹಾರಾಟ ನಡೆಸುತ್ತಿತ್ತು. ಈ ವೇಳೆ, ಮುಂಬೈ ವಿಮಾನ ನಿಲ್ದಾಣದ ರನ್‌ವೇ 27ರಲ್ಲಿ ಇಳಿಯುವಾಗ ಜಾರಿದೆ. ವಿಮಾನದಲ್ಲಿ ಆರು ಮಂದಿ ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದರು. ಯಾವುದೇ ಪ್ರಾಣಹಾನಿ ಬಗ್ಗೆ ವರದಿಯಾಗಿಲ್ಲ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಮೂಲಗಳು ತಿಳಿಸಿವೆ.
ಈ ಘಟನೆ ವೇಳೆ, ಭಾರೀ ಮಳೆಯೊಂದಿಗೆ 700 ಮೀಟರ್ ಗೋಚರತೆ ಇತ್ತು ಎಂದು ಡಿಜಿಸಿಎ ಹೇಳಿದೆ. ಮುಂಬೈ ಎರಡು ವಿಮಾನ ನಿಲ್ದಾಣಗಳನ್ನು ಹೊಂದಿದೆ. ಟರ್ಮಿನಲ್ 1 ಮತ್ತು ಟರ್ಮಿನಲ್ 2 ಎರಡೂ ಕೂಡ ಉಪನಗರ ಪ್ರದೇಶದಲ್ಲಿವೆ.
ಇದನ್ನೂ ಓದಿ:ಇಂಜಿನ್ನಲ್ಲಿ ಕಾಣಿಸಿಕೊಂಡ ಬೆಂಕಿ: ಸಿಂಗಾಪುರದಲ್ಲಿ ಚೀನಾದ ವಿಮಾನ ತುರ್ತು ಭೂಸ್ಪರ್ಶ, 9 ಜನರು ಅಸ್ವಸ್ಥ..
ದೆಹಲಿ ವಿಮಾನ ನಿಲ್ದಾಣದ ಘಟನೆ:ಆಗಸ್ಟ್ 23ರಂದುರಾಷ್ಟ್ರ ರಾಜಧಾನಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಭಾರಿ ವಿಮಾನ ದುರಂತ ತಪ್ಪಿತ್ತು. ಏಕಕಾಲಕ್ಕೆ ಒಂದೇ ರನ್ವೇಯಲ್ಲಿ ವಿಸ್ತಾರ ವಿಮಾನಯಾನ ಸಂಸ್ಥೆಯ ಎರಡು ವಿಮಾನಗಳಿಗೆ ಟೇಕ್‌ಆಫ್ ಹಾಗೂ ಲ್ಯಾಂಡಿಂಗ್‌ಗೆ ಅವಕಾಶ ನೀಡಲಾಗಿತ್ತು. ಆದರೆ, ಸುದೈವವಶಾತ್ ಎಂಬಂತೆ ವಿಮಾನಗಳ ನಡುವಿನ ಸಂಭವನೀಯ ಅಪಘಾತ ತಪ್ಪಿತ್ತು. ಈ ಘಟನೆಯ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತನಿಖೆಗೆ ಆದೇಶಿಸಿತ್ತು.
ಗುಜರಾತ್ನ ಅಹಮದಾಬಾದ್ನಿಂದ ದೆಹಲಿಗೆ ಬರುತ್ತಿದ್ದ ವಿಸ್ತಾರ ವಿಟಿಐ 926 ವಿಮಾನವು ಏರ್ಪೋರ್ಟ್ನ ರನ್‌ವೇ 29 ಎಲ್ನಲ್ಲಿ ಲ್ಯಾಂಡ್ ಆಗಿತ್ತು. ಆದರೆ, ಈ ವಿಮಾನವು ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) ನಿರ್ದೇಶನದ ಮೇರೆಗೆ ರನ್‌ವೇ 29 ಆರ್ಗೆ ಕ್ರಾಸ್ ಮಾಡಿತ್ತು. ಇದೇ ಸಮಯಕ್ಕೆ ಮತ್ತೊಂದು ವಿಸ್ತಾರ ವಿಮಾನ ದೆಹಲಿಯಿಂದ ಪಶ್ಚಿಮ ಬಂಗಾಳದ ಬಗದೋರ್ಗಾಕ್ಕೆ ಟೇಕ್ ಆಫ್ ಮಾಡಬೇಕಿತ್ತು. ಈ ವಿಮಾನಕ್ಕೂ ಇದೇ ರನ್‌ವೇ 29 ಆರ್ನಿಂದ ಟೇಕ್‌ಆಫ್ ಆಗಲು ಏರ್ ಟ್ರಾಫಿಕ್ ಕಂಟ್ರೋಲರ್ ಅನುಮತಿ ನೀಡಿದ್ದರು.
ಟ್ರಾಫಿಕ್ ಕಂಟ್ರೋಲರ್ ಅಜಾಗರೂಕತೆಯಿಂದ ಎರಡು ವಿಮಾನಗಳು ಏಕಾಕಾಲಕ್ಕೆ ಕಾರ್ಯಾಚರಣೆ ಮಾಡಿದ್ದರೆ ಭಾರಿ ದುರಂತ ಸಂಭವಿಸುವ ಸಾಧ್ಯತೆ ಇತ್ತು. ಆದರೆ, ಕೂಡಲೇ ತನ್ನ ಪ್ರಮಾದವನ್ನು ಅರಿತ ಕಂಟ್ರೋಲರ್ ಬಗದೋರ್ಗಾ ವಿಮಾನದ ಟೇಕ್‌ಆಫ್ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದರು. ಇದರಿಂದ ದುರಂತ ತಪ್ಪಿತ್ತು.
ಇದನ್ನೂ ಓದಿ:2 ವಿಮಾನಗಳಿಗೆ ಏಕಕಾಲದಲ್ಲಿ ಟೇಕ್‌ಆಫ್, ಲ್ಯಾಂಡಿಂಗ್‌ಗೆ ಅವಕಾಶ! ದೆಹಲಿ ಏರ್‌ಪೋರ್ಟ್‌ನಲ್ಲಿ ತಪ್ಪಿದ ಅತಿದೊಡ್ಡ ದುರಂತ