ಮುಂಬೈ: ಯಾರದಾದರೂ ಒಂದು ವಸ್ತು ಕಳೆದುಹೋದಾಗ ಅವರಿಗೆ ಆತಂಕವಾಗುವುದು ಸಹಜ. ಆದರೆ ಕೆಲ ದಿನಗಳ ನಂತರ ಅದೇ ವಷ್ಟತ ಮರಳಿ ಸಿಕ್ಕರೆ ಸಿಕ್ಕಾಪಟ್ಟೆ ಸಂತೋಷವಾಗುತ್ತದೆ. ಅಂಥದೇ ಒಂದು ಖುಷಿ ಮುಂಬೈನ ಆಟೋ ರಿಕ್ಷಾ ಚಾಲಕನೊಬ್ಬನಿಗೆ ಇಂದು ಆಗಿರುವುದು ಕಂಡು ಬಂದಿತು. ಈ ಆಟೋ ಚಾಲಕನ ಖುಷಿಗೆ ಕಾರಣವಾಗಿದ್ದು ಮುಂಬೈ ಪೊಲೀಸರು. ಮುಂಬೈ ಪೊಲೀಸರ ಪ್ರಯತ್ನದಿಂದ ಆಟೋ ಚಾಲಕನೊಬ್ಬನ ಮುಖದಲ್ಲಿ ಮಂದಹಾಸ ಮರಳಿದೆ ಎಂಬುದು ಸತ್ಯ.
ಮಾರ್ಚ್ 2020 ರಲ್ಲಿ ಆರಂಭವಾದ ಕೊರೊನಾ ಬಿಕ್ಕಟ್ಟು ಎಲ್ಲರ ಮೇಲೂ ಪರಿಣಾಮ ಬೀರಿತ್ತು. ಅದಾಗಿ ಕೆಲ ತಿಂಗಳುಗಳ ನಂತರ ಜೀವನ ಸುಗಮವಾಗಲು ಪ್ರಾರಂಭಿಸಿತ್ತು. ಇದೇ ಸಮಯದಲ್ಲಿ ಅಮರನಾಥ ಶರ್ಮಾ ಎಂಬುವರು ನಿಧಾನವಾಗಿ ರಿಕ್ಷಾ ಡ್ರೈವಿಂಗ್ ವ್ಯವಹಾರ ಆರಂಭಿಸಿದ್ದರು. ಬಾಂದ್ರಾ ಈಸ್ಟ್ ಪ್ರದೇಶದಲ್ಲಿ ವಾಸವಾಗಿರುವ ರಿಕ್ಷಾ ಚಾಲಕ ಅಮರನಾಥ್ ರಿಕ್ಷಾ ಓಡಿಸಿ ಗಳಿಸಿದ ಹಣದಿಂದ ತನ್ನ ಕುಟುಂಬವನ್ನು ಸಾಕುತ್ತಿದ್ದ. ಅಮರನಾಥ್ ಅವರ ಮಗ ಅಮಿತ್ಕುಮಾರ್ ಕೂಡ ತನ್ನ ತಂದೆಯ ರಿಕ್ಷಾ ವ್ಯಾಪಾರಕ್ಕೆ ಸಹಾಯ ಮಾಡುವ ಮೂಲಕ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದರೆ ಒಂದು ದಿನ ಅಮಿತ್ಕುಮಾರ್ ರಿಕ್ಷಾ ಓಡಿಸುವ ಕೆಲಸ ಮಾಡುತ್ತಿದ್ದಾಗ ಬಾಂದ್ರಾ ಈಸ್ಟ್ ಮೆಟ್ರೋ ನಿಲ್ದಾಣದ ಬಳಿ ಲೇನ್ ನಂಬರ್ ಎರಡರಲ್ಲಿ ರಿಕ್ಷಾ ಕಳ್ಳತನವಾಗಿತ್ತು.
ಅಮರನಾಥ ಶರ್ಮಾ 1995ರಲ್ಲಿ ಸಾಲ ಮಾಡಿ ರಿಕ್ಷಾ ಖರೀದಿಸಿದ್ದರು. ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯವರಾದ ಅವರು ಬಾಂದ್ರಾ ಈಸ್ಟ್ ಪ್ರದೇಶದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ರಿಕ್ಷಾ ಓಡಿಸಿ ಬರುವ ಆದಾಯದಲ್ಲಿ ಅವರ ಕುಟುಂಬ ಬದುಕುತ್ತಿತ್ತು. ಆದರೆ 2021ರಲ್ಲಿ ಅಮರನಾಥ್ ಅವರ ರಿಕ್ಷಾ ಕಳುವಾಗಿದ್ದರಿಂದ ಅವರಿಗೆ ಬಲು ದೊಡ್ಡ ಸಂಕಷ್ಟ ಎದುರಾಗಿತ್ತು. ಇಂಥ ಸಂದರ್ಭದಲ್ಲಿ ಅಮರನಾಥ್ ಬೇರೆಯವರ ರಿಕ್ಷಾ ಓಡಿಸಿ ಸಂಸಾರ ನಿಭಾಯಿಸಲಾರಂಭಿಸಿದರು.