ಮುಂಬೈ (ಮಹಾರಾಷ್ಟ್ರ): ಪೊಲೀಸ್ ಇಲಾಖೆಯಲ್ಲಿ ಶ್ವಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ಅನೇಕ ಅಪರಾಧ ಪ್ರಕರಣಗಳಲ್ಲಿ ಸಾಕ್ಷ್ಯ ಸಂಗ್ರಹಿಸುವಲ್ಲಿ ಶ್ವಾನಗಳನ್ನು ಬಳಸಲಾಗುತ್ತದೆ. ತಮ್ಮ ವಿಶೇಷ ಗ್ರಹಿಕ ಶಕ್ತಿಯಿಂದ ಈ ಮೂಕಪ್ರಾಣಿಗಳು ಕಷ್ಟಕರ ಪರಿಸ್ಥಿತಿಯಲ್ಲಿ ಪೊಲೀಸರ ನೆರವಿಗೆ ಬರುತ್ತವೆ. ಮಹಾರಾಷ್ಟ್ರದ ಮುಂಬೈನಲ್ಲಿ ಅಪಹರಣಕ್ಕೊಳಗಾಗಿದ್ದ ಆರು ವರ್ಷದ ಬಾಲಕನನ್ನು ಒಂದೂವರೆ ಗಂಟೆಯಲ್ಲಿ ಪತ್ತೆ ಹಚ್ಚುವಲ್ಲಿ ಪೊಲೀಸ್ ಶ್ವಾನ ಯಶಸ್ವಿಯಾಗಿದೆ.
ಇಲ್ಲಿನ ಅಂಧೇರಿ ಪೂರ್ವದ ಕೆಬಿಎಂ ಕಾಂಪೌಂಡ್ ಕೊಳೆಗೇರಿಯಲ್ಲಿ ನವೆಂಬರ್ 23ರಂದು ರಾತ್ರಿ 8 ಗಂಟೆ ಸುಮಾರಿಗೆ ಆರು ವರ್ಷದ ವಿವೇಕ್ ಫೂಲ್ಚಂದ್ ಕೋರಿ ಎಂಬ ಬಾಲಕ ತನ್ನ ಮನೆ ಬಳಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ. ಆದರೆ, ನಂತರ ಇದ್ದಕ್ಕಿದ್ದಂತೆ ಬಾಲಕ ಕಾಣೆಯಾಗಿದ್ದ. ಹೀಗಾಗಿ ಆತನಿಗಾಗಿ ತಾಯಿ ವಿಮ್ಲಾ ಫೂಲ್ಚಂದ್ ಕೋರಿ ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಆದ್ದರಿಂದ ನವೆಂಬರ್ 24ರಂದು ಮಧ್ಯಾಹ್ನ 12:30ರ ಸುಮಾರಿಗೆ ಪೊವಾಯಿ ಪೊಲೀಸ್ ಠಾಣೆಗೆ ಧಾವಿಸಿ ಮಗನ ಪತ್ತೆ ಬಗ್ಗೆ ದೂರು ದಾಖಲಿಸಿದ್ದರು.
ಶ್ವಾನದ ನೆರವಿನಿಂದ 90 ನಿಮಿಷದಲ್ಲಿ ಬಾಲಕ ಪತ್ತೆ:ಈ ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸರು ತಕ್ಷಣ ಅಪರಾಧ ವಿಭಾಗದ ಪೊವಾಯಿ ಮೊಬೈಲ್ ತಂಡದಿಂದ ಕಾಣೆಯಾದ ಬಾಲಕನ ಹುಡುಕಾಟಕ್ಕಾಗಿ ಪ್ರಾರಂಭಿಸಿದ್ದರು. ಅಲ್ಲದೇ, ಮುಖ್ಯ ನಿಯಂತ್ರಣ ಕೊಠಡಿ ಹಾಗೂ ಟ್ರಾಫಿಕ್ ಕಂಟ್ರೋಲ್ ರೂಮ್ ಮೂಲಕ ಮಾಹಿತಿಯನ್ನು ಹಂಚಿಕೊಂಡು ಪತ್ತೆ ಕಾರ್ಯ ಚುರುಕುಗೊಳಿಸಿದ್ದರು.