ಮುಂಬೈ(ಮಹಾರಾಷ್ಟ್ರ):ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ನೂಪುರ್ ಶರ್ಮಾರ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 22 ರಂದು ವಿಚಾರಣೆ ಹಾಜರಾಗಲು ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಅಲ್ಲದೇ, ಸರ್ಕಾರವೂ ಕೂಡ ಶರ್ಮಾರ ವಿರುದ್ಧ ತನಿಖೆಗೆ ಸೂಚಿಸಿದೆ.
ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇರೆಗೆ ನೂಪುರ್ ಶರ್ಮಾ ವಿರುದ್ಧ ಮುಂಬ್ರಾ ಪೊಲೀಸ್ ಠಾಣೆಯಲ್ಲಿ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ದೂರು ದಾಖಲಿಸಿದೆ. ಇದೀಗ ಮೊಹಮ್ಮದ್ ಗುಫ್ರಾನ್ ಅಕ್ಮಲ್ ಖಾನ್ ಎಂಬುವವರು ನೀಡಿದ ದೂರಿನ ಮೇರೆಗೆ ಥಾಣೆಯ ಮುಂಬ್ರಾ ಪೊಲೀಸರು ನೂಪುರ್ ಶರ್ಮಾ ವಿರುದ್ಧ ಸೆಕ್ಷನ್ 153 ಎ, 153 ಬಿ, 295 ಎ, 298 ಮತ್ತು 505 ರ ಅಡಿ ಪ್ರಕರಣ ದಾಖಲಿಸಿಕೊಂಡು ಜೂನ್ 22 ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದಾರೆ.