ಮುಂಬೈ :ವಾಣಿಜ್ಯ ನಗರಿಯಲ್ಲಿ ಇಂದು ಭಾರಿ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ಮಹಾಲಕ್ಷ್ಮಿ ನಗರದಲ್ಲಿ ದುರ್ಘಟನೆ ನಡೆದಿದ್ದು, ಜನ ವಸತಿ ಕಟ್ಟಡವೊಂದರಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೂರು ಅಗ್ನಿ ಶಾಮಕ ದಳಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಟ್ಟಿವೆ. ಈ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆಯೋರ್ವಳನ್ನು ರಕ್ಷಿಸಲಾಗಿದೆ.
ವಿಠ್ಠಲ್ ನಿವಾಸ್ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ ಮಹಾಲಕ್ಷ್ಮಿ ನಗರದ ಜೇಕಬ್ ಸರ್ಕಲ್ 7 ರಸ್ತೆಯಲ್ಲಿರುವ ವಿಠ್ಠಲ್ ನಿವಾಸ್ ಕಟ್ಟಡದ ಎರಡನೇ ಮಹಡಿಯಲ್ಲಿರುವ ಮನೆಯೊಂದರಲ್ಲಿ ಬುಧವಾರ ಸರಿ ಸುಮಾರು ಮಧ್ಯಾಹ್ನ 12 ಗಂಟೆ ವೇಳೆ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಮಹಿಳೆಯೊಬ್ಬಳು ಮನೆಯಿಂದ ಹೊರ ಬರಲಾಗದೇ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಸ್ಥಳೀಯರು ಕೂಡಲೇ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ್ದರು.
ಓದಿ:ಮರ ಹತ್ತಿ ಕುಳಿತ ಕಾಳಿಂಗ ನೋಡಿ .. ಸುರಕ್ಷಿತವಾಗಿ ಹಿಡಿದು ಕಾಡಿಗೆ ಕಳುಹಿಸಿದ ಸ್ನೇಕ್ ಕಿರಣ್!
ಸರಿಯಾದ ಸಮಯಕ್ಕೆ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದೆ. ಪ್ರಾಣವನ್ನು ಅಂಗೈಯಲ್ಲಿಟ್ಟುಕೊಂಡು ಸಹಾಯಕ್ಕಾಗಿ ಕಾಯುತ್ತಿದ್ದ ಮಹಿಳೆಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿಯು ಬೆಂಕಿಯನ್ನು ನಂದಿಸುವ ಕಾರ್ಯಕ್ಕೆ ಮುಂದಾದರು. ಸ್ವಲ್ಪ ಸಮಯದ ನಂತರ ಬೆಂಕಿಯ ಕೆನ್ನಾಲಿಗೆಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.
ಪಾಲಿಕೆಯ ತುರ್ತು ನಿರ್ವಹಣಾ ವಿಭಾಗದ ಪ್ರಕಾರ, ಈ ಬೆಂಕಿ ಅವಘಡದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಈ ಬೆಂಕಿ ಹೇಗೆ ಹೊತ್ತಿಕೊಂಡಿದೆ ಎಂಬುದರ ಬಗ್ಗೆ ಮಾಜಿ ಮೇಯರ್ ಕಿಶೋರಿ ಪೆಡ್ನೇಕರ್ ಮಾಹಿತಿ ಕಲೆ ಹಾಕುತ್ತಿದ್ದಾರೆ.