ಮುಂಬೈ:ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿರುವ ಬೆನ್ನಲ್ಲೇ ಪಣಜಿಯಿಂದ ಮುಂಬೈಗೆ ಆಗಮಿಸಿದ ಶಿವಸೇನೆ ಬಂಡಾಯ ಶಾಸಕರ ತಂಡದ ನಾಯಕ ಏಕನಾಥ್ ಶಿಂಧೆ ಕೆಲ ನಿಮಿಷಗಳ ಹಿಂದೆ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾದರು. ಬಳಿಕ ಉಭಯ ನಾಯಕರು ರಾಜಭವನಕ್ಕೆ ತೆರಳಿದ್ದು, ಹೊಸ ಸರ್ಕಾರ ರಚನೆಗೆ ರಾಜ್ಯಪಾಲರಲ್ಲಿ ಹಕ್ಕು ಮಂಡನೆ ಮಾಡಲಿದ್ದಾರೆ.
ಮಹಾರಾಷ್ಟ್ರ ನೂತನ ಸಿಎಂ ಆಗಿ ದೇವೇಂದ್ರ ಫಡ್ನವೀಸ್ ಇಂದೇ ಪ್ರಮಾಣವಚನ ಸಾಧ್ಯತೆ - ದೇವೇಂದ್ರ ಫಡ್ನವೀಸ್ ಭೇಟಿ ಮಾಡಿದ ಏಕನಾಥ್ ಶಿಂಧೆ
ಗೋವಾದಿಂದ ಆಗಮಿಸಿರುವ ಶಿವಸೇನೆ ಬಂಡಾಯ ಶಾಸಕರ ಗುಂಪಿನ ನಾಯಕ ಏಕನಾಥ್ ಶಿಂಧೆ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಫಡ್ನವೀಸ್ ಮಹಾರಾಷ್ಟ್ರ ಸಿಎಂ ಆಗಿ ಇಂದೇ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಮಹಾವಿಕಾಸ್ ಅಘಾಡಿ ಮೈತ್ರಿ ಸರ್ಕಾರ ವಿರುದ್ಧ ಬಂಡಾಯವೆದ್ದ ಶಿವಸೇನೆಯ ಕೆಲ ಶಾಸಕರು ಸರ್ಕಾರ ನೀಡಿರುವ ಬೆಂಬಲ ವಾಪಸ್ ಪಡೆದುಕೊಂಡಿರುವುದಾಗಿ ಕಳೆದ ಎರಡು ದಿನಗಳ ಹಿಂದೆ ಘೋಷಣೆ ಮಾಡಿದ್ದರು. ಹೀಗಾಗಿ, ಸರ್ಕಾರ ಅಲ್ಪಮತಕ್ಕೆ ಕುಸಿದಿತ್ತು. ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಮಾಡುವಂತೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಉದ್ಧವ್ ಸರ್ಕಾರಕ್ಕೆ ಸೂಚನೆ ನೀಡಿದ್ದರು. ಇದನ್ನು ಪ್ರಶ್ನಿಸಿ ಉದ್ಧವ್ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅಲ್ಲೂ ಕೂಡ ಹಿನ್ನಡೆಯಾಗಿರುವ ಕಾರಣ, ರಾತ್ರಿ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ಇದೀಗ ವಿಶ್ವಾಸಮತಯಾಚನೆ ನಡೆಯದ ಕಾರಣ, ನೇರವಾಗಿ ರಾಜ್ಯಪಾಲರ ಬಳಿ ತೆರಳಿರುವ ದೇವೇಂದ್ರ ಫಡ್ನವೀಸ್ ಹಾಗೂ ಏಕನಾಥ್ ಶಿಂಧೆ ಹೊಸ ಸರ್ಕಾರ ರಚನೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಲಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಇಂದು ರಾತ್ರಿ 7 ಗಂಟೆಗೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅಧಿಕಾರ ಸ್ವೀಕರಿಸುವರು.