ಮುಂಬೈ:ವ್ಯಾಪಕ ಮಳೆಯಿಂದಾಗಿ ಅಪಾಯಕಾರಿ ಮಟ್ಟದಲ್ಲಿ ನದಿ, ಸಮುದ್ರಗಳು ಉಕ್ಕಿ ಹರಿಯುತ್ತಿವೆ. ಪ್ರಕೃತಿ ನರ್ತನದ ನಡುವೆಯೂ ವೀಕೆಂಡ್ ರಜೆಯಲ್ಲಿ ಜನರು ಮೋಜು ಮಸ್ತಿಗಾಗಿ ಪ್ರವಾಸಿ ತಾಣಗಳಿಗೆ ತೆರಳುತ್ತಿದ್ದಾರೆ. ಇದು ಅಪಾಯಕ್ಕೆ ಎಡೆಮಾಡಿಕೊಡುತ್ತಿದೆ. ಮಹಾರಾಷ್ಟ್ರದ ಮಾರ್ವೆ ಬೀಚಿಗೆ ಭಾನುವಾರ ತೆರಳಿದ್ದ ಮೂವರು ಬಾಲಕರು ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದರು. ಇಂದು ಅವರ ಮೃತದೇಹಗಳು ಪತ್ತೆಯಾಗಿವೆ.
ಮೃತ ಬಾಲಕರು 12 ರಿಂದ 16 ವರ್ಷದೊಳಗಿನವರಾಗಿದ್ದಾರೆ. ಐವರು ಬಾಲಕರು ಭಾನುವಾರ ಮುಂಬೈನ ಮಾರ್ವೆ ಬೀಚಿಗೆ ತೆರಳಿದ್ದರು. ನೀರಿನಾಟದಲ್ಲಿ ಮೈಮರೆತಿದ್ದ ಹುಡುಗರು ಸೆಳೆತಕ್ಕೆ ಸಿಲುಕಿ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಮಾಹಿತಿ ಸಿಕ್ಕ ತಕ್ಷಣವೇ ಅಗ್ನಿಶಾಮಕ ದಳ ಸಿಬ್ಬಂದಿ, ಕೋಸ್ಟ್ಗಾರ್ಡ್, ಪೊಲೀಸರು, ನೌಕಾಪಡೆಯ ರಕ್ಷಣಾ ಪಡೆಗಳು ಧಾವಿಸಿ ಬಂದು ಇಬ್ಬರನ್ನು ರಕ್ಷಿಸಿದ್ದಾರೆ. ಆದರೆ, ಇನ್ನೂ ಮೂವರು ನಾಪತ್ತೆಯಾಗಿದ್ದರು. ರಾತ್ರಿವರೆಗೂ ಕಾರ್ಯಾಚರಣೆ ನಡೆಸಿದರೂ ಎಲ್ಲೂ ಪತ್ತೆಯಾಗಿರಲಿಲ್ಲ. ಬಳಿಕ ಕಾರ್ಯಾಚರಣೆ ನಿಲ್ಲಿಸಲಾಗಿತ್ತು.
ರಕ್ಷಣಾ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಸೇರಿದಂತೆ ಹೆಲಿಕಾಪ್ಟರ್ ಕೂಡ ಬಳಸಲಾಗಿತ್ತು. ಸತತ ಪ್ರಯತ್ನದ ನಡುವೆಯೂ ಮಕ್ಕಳನ್ನು ಪತ್ತೆ ಮಾಡಲಾಗಿರಲಿಲ್ಲ. ಸೋಮವಾರ ಬೆಳಗ್ಗೆ ಬಾಲಕರ ಶವಗಳು ಬೀಚ್ ಬಳಿ ಸಿಕ್ಕಿವೆ. ಶವಗಳನ್ನು ವಶಕ್ಕೆ ಪಡೆದ ಪೊಲೀಸರು, ಶತಾಬ್ದಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಬಳಿಕ ಆಯಾ ಕುಟುಂಬಸ್ಥರಿಗೆ ಮೃತದೇಗಳನ್ನು ನೀಡಲಾಗಿದೆ.