ಮುಂಬೈ : 22 ವರ್ಷದ ಯುವತಿಯೊಬ್ಬಳ ಮೇಲೆ ಯುವಕರ ಗುಂಪೊಂದು ಚಾಕು ಹಾಗೂ ಬ್ಲೇಡ್ಗಳಿಂದ ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಚಾರ್ನಿ ರಸ್ತೆಯಲ್ಲಿ ತನ್ನ ಸಹೋದರನೊಂದಿಗೆ ಕೂಡಿಕೊಂಡು ಯುವತಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಳು. ಇದೇ ಸಂದರ್ಭದಲ್ಲಿ ಚಾಕು ಹಾಗೂ ಬ್ಲೇಡ್ಗಳಿಂದ ಅವರ ಮೇಲೆ ದಾಳಿ ಮಾಡಲಾಗಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಯುವತಿ ಸಿಮ್ರಾನ್‌ಗೆ ತಕ್ಷಣ ಚಿಕಿತ್ಸೆ ಕೊಡಿಸಲಾಯಿತು. ಮುಂಬೈನ ಚಾರ್ನಿ ರಸ್ತೆ ಸಿಪಿ ಟ್ಯಾಂಕ್ನ ಸಿಕ್ಕಾ ನಗರ ಪ್ರದೇಶದಲ್ಲಿ ಈ ಘೋರ ಘಟನೆ ನಡೆದಿದೆ. ಘಟನೆಯ ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿದ್ದರು.
ಸಹೋದರ ಮತ್ತು ಸಹೋದರಿ ಇಬ್ಬರೂ ಆಗಾಗ ಈ ಪ್ರದೇಶದಲ್ಲಿನ ಬೀದಿನಾಯಿಗಳಿಗೆ ಆಹಾರ ನೀಡುತ್ತಿದ್ದರು. ಆದರೆ ಹಾಗೆ ಆಹಾರ ನೀಡುವಾಗಲೆಲ್ಲ ಸ್ಥಳೀಯರು ಅವರಿಬ್ಬರನ್ನೂ ಪದೇ ಪದೆ ನಿಂದಿಸಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈಗ ಹಲ್ಲೆ ಮಾಡಿದ ಆರೋಪಿಗಳು ಯುವತಿಗೆ ಅಶ್ಲೀಲವಾಗಿ ನಿಂದಿಸುತ್ತಿದ್ದರು ಮತ್ತು ನಾಯಿಗಳಿಗೆ ಆಹಾರ ನೀಡದಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.
ಜೆಜೆ ಆಸ್ಪತ್ರೆಗೆ ದಾಖಲಾಗಿರುವ ಯುವತಿಗೆ 46 ಕ್ಕೂ ಹೆಚ್ಚು ಹೊಲಿಗೆ ಹಾಕಿ ಗಾಯಗಳಿಗೆ ಚಿಕಿತ್ಸೆ ನೀಡಲಾಗಿದೆ. ಘಟನೆಯಲ್ಲಿ ಆಕೆಯ 14 ವರ್ಷದ ಸಹೋದರನಿಗೂ ಗಾಯವಾಗಿದೆ. ಇದಕ್ಕೂ ಮೊದಲು, ವಿಷಯ ಬೆಳಕಿಗೆ ಬಂದ ನಂತರ ಜಸ್ಟ್ ಸ್ಮೈಲ್ ಚಾರಿಟೇಬಲ್ ಟ್ರಸ್ಟ್ ಸದಸ್ಯರು ತಕ್ಷಣ ಸ್ಥಳಕ್ಕೆ ಧಾವಿಸಿ, ಸಿಮ್ರಾನ್ ಅವರನ್ನು ರಕ್ಷಿಸಿದರು ಹಾಗೂ ಜೆಜೆ ಆಸ್ಪತ್ರೆಗೆ ಕರೆದೊಯ್ದರು. ಘಟನೆಯ ಮರುದಿನ ಬೆಳಗ್ಗೆ ಜಸ್ಟ್ ಸ್ಮೈಲ್ ಚಾರಿಟೇಬಲ್ ಟ್ರಸ್ಟ್ ಎನ್‌ಜಿಒ ಸದಸ್ಯರು ಯುವತಿಯೊಂದಿಗೆ ಪೊಲೀಸ್ ಠಾಣೆಗೆ ಬಂದು ಎಫ್ಐಆರ್ ದಾಖಲಿಸಿದ್ದಾರೆ.