ಮುಂಬೈ (ಮಹಾರಾಷ್ಟ್ರ):ಅಂದಾಜು 100 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿ ಸ್ವಂತ ಸಹೋದರನಿಗೆ ಮೋಸ ಮಾಡಿದ ಆರೋಪದ ಮೇಲೆ ಮುಂಬೈ ಮೂಲದ ಮಹಿಳಾ ಆರೋಪಿಯನ್ನು ಕರ್ನಾಟಕದ ಮೈಸೂರಿನಲ್ಲಿ ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.
ಸೆಂಟ್ರಲ್ ಮುಂಬೈನ ನಿವಾಸಿ ಅಬಿದಾ ಇಸ್ಮಾಯಿಲ್ ಎಂಬ ಮಹಿಳೆಯೇ ಬಂಧಿತ ಆರೋಪಿ. ಈಕೆ ತನ್ನ ಸಂಬಂಧಿಕರು ಹಾಗೂ ಸಹೋದರನಿಗೆ ಸೇರಿದ ಆಸ್ತಿಯನ್ನು ಬೇರೊಬ್ಬರಿಗೆ ಮಾರಾಟ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಇದರ ಅಂದಾಜು ಮೌಲ್ಯ 100 ಕೋಟಿ ರೂ. ಎಂದು ತಿಳಿದು ಬಂದಿದೆ. ಈ ಕುರಿತು ಸಂಬಂಧಿಕರು ನೀಡಿದ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಅಲ್ಲದೇ, ಆರೋಪಿ ಮಹಿಳೆಯ ಪತ್ತೆಗಾಗಿ ಮುಂಬೈ ಪೊಲೀಸರು, ದೇಶದ ಹಲವು ಭಾಗಗಳ ಪೊಲೀಸ್ ಠಾಣೆಗಳಿಗೆ ಮಾಹಿತಿಯನ್ನೂ ಹಂಚಿಕೊಂಡಿದ್ದರು. ಪೊಲೀಸರು ಎಲ್ಲೆಡೆ ಶೋಧ ನಡೆಸುತ್ತಿರುವಾಗಲೇ ಮೈಸೂರಿನಲ್ಲಿ ಕೆಲ ದಿನಗಳ ಹಿಂದೆ ಆಕೆಯನ್ನು ಪೊಲೀಸರು ಬಂಧಿಸಿ ಮುಂಬೈಗೆ ಕರೆದೊಯ್ದಿದ್ದಾರೆ.
ಈ ಕುರಿತು ಆರ್ಥಿಕ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಸಂಗ್ರಾಮ್ ಸಿಂಗ್ ನಿಶಾಂದರ್ ಮಾಹಿತಿ ನೀಡಿದ್ದು, ಆಸ್ತಿ ಮಾರಾಟ ಮಾಡಿ ವಂಚಿಸಿದ ಕುರಿತ ದೂರನ್ನು ಆರ್ಥಿಕ ಅಪರಾಧ ವಿಭಾಗಕ್ಕೆ ಹಸ್ತಾಂತರ ಮಾಡಲಾಗಿತ್ತು. ಅಂತೆಯೇ, ಈ ಕುರಿತು ತನಿಖೆ ಆರಂಭಿಸಿ ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ. ಸದ್ಯ ಈಕೆ ನ್ಯಾಯಾಂಗ ಬಂಧನದಲ್ಲಿದ್ದು, ಬೈಕುಲ್ಲಾ ಜೈಲಿಗೆ ರವಾನಿಸಲಾಗಿದೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:'ಜೈಲರ್' ಖಳನಾಯಕನ ರಿಯಲ್ ಬಂಧನ: ಕಾರಣ ತಿಳಿಸಿದ ಪೊಲೀಸ್ ಅಧಿಕಾರಿಗಳು..