ಕರ್ನಾಟಕ

karnataka

ETV Bharat / bharat

ತಮ್ಮ ಕಾರಿಗೆ ಜಾನುವಾರುಗಳು ಅಡ್ಡ ಬಂದಿದ್ದಕ್ಕೆ 7,500 ರೂ ದಂಡ ವಿಧಿಸಿದ ಜಿಲ್ಲಾಧಿಕಾರಿ! - ಮಂಗಪೇಟೆ

ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ವಿಚಿತ್ರ ಘಟನೆ - ಜಿಲ್ಲಾಧಿಕಾರಿಗಳ ಕಾರಿಗೆ ಅಡ್ಡ ಬಂದ ಜಾನುವಾರುಗಳು - 7,500 ರೂಪಾಯಿ ದಂಡ ವಿಧಿಸಿದ ಅಧಿಕಾರಿಗಳು

mulugu-district-collector-fined-the-cattle-for-crossing-the-car
ತಮ್ಮ ಕಾರಿಗೆ ಜಾನುವಾರುಗಳು ಅಡ್ಡ ಬಂದಿದ್ದಕ್ಕೆ ದಂಡ ವಿಧಿಸಿದ ಜಿಲ್ಲಾಧಿಕಾರಿ

By

Published : Jan 4, 2023, 8:38 PM IST

ಮುಲುಗು (ತೆಲಂಗಾಣ):ತಮ್ಮ ಕಾರಿಗೆ ಜಾನುವಾರುಗಳು ಅಡ್ಡ ಬಂದಿವೆ ಎಂಬ ಏಕೈಕ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಜಿಲ್ಲಾಧಿಕಾರಿ ದಂಡ ವಿಧಿಸಿರುವ ಆರೋಪ ತೆಲಂಗಾಣದಲ್ಲಿ ಕೇಳಿ ಬಂದಿದೆ. ನೆಟ್ಟಿರುವ ಗಿಡಗಳನ್ನು ಜಾನುವಾರುಗಳು ನಾಶಪಡಿಸುತ್ತಿವೆ ಎಂಬ ನೆಪದಲ್ಲಿ ಈ ದಂಡ ಹಾಕಲಾಗಿದೆ ಎಂದು ಹೇಳಲಾಗ್ತಿದೆ.

ಹೌದು, ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ. ಇಲ್ಲಿನ ಮಂಗಪೇಟೆ ಮಂಡಲದ ನಿವಾಸಿ ಬೋಯಿನಿ ಯಾಕಯ್ಯ ಎಂಬುವವರು ಅಧಿಕಾರಿಗಳ ಸೂಚನೆ ಮೇರೆಗೆ ಭಯದಿಂದ ಬರೋಬ್ಬರಿ 7,500 ರೂಪಾಯಿ ದಂಡವನ್ನು ಪಾವತಿಸಿದ್ದಾರೆ.

ಇಷ್ಟಕ್ಕೂ ನಡೆದಿದ್ದೇನು?:ಯಾಕಯ್ಯ ತಮ್ಮ ಎಮ್ಮೆಗಳನ್ನು ಮೇಯಿಸಲೆಂದು ಕಾಡಿನ ಕಡೆಗೆ ಹೊಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎಮ್ಮೆಗಳನ್ನು ರಸ್ತೆ ದಾಟಿಸುತ್ತಿದ್ದಾಗ ಜಿಲ್ಲಾಧಿಕಾರಿಗಳ ಕಾರು ಬಂದಿದೆ. ಆಗ ಕಾರಿನ ಚಾಲಕ ಹಾರ್ನ್​ ಮಾಡಿದ್ದಾರೆ. ಆದರೆ, ಯಾಕಯ್ಯ ಹಾರ್ನ್ ಕೇಳಿಸಿಕೊಳ್ಳದೇ ನಿರ್ಲಕ್ಷಿಸುತ್ತಾ ಫೋನ್​ನಲ್ಲಿ ಮಾತನಾಡುವುದರಲ್ಲಿ ನಿರತನಾಗಿದ್ದ ಎನ್ನಲಾಗಿದೆ.

ಹೀಗಾಗಿಯೇ ಕೋಪಗೊಂಡ ಜಿಲ್ಲಾಧಿಕಾರಿ ರಸ್ತೆಯಲ್ಲಿ ಎಮ್ಮೆ ಹೊಡೆದುಕೊಂಡು ಹೋಗುತ್ತಿದ್ದ ಯಾಕಯ್ಯ ವಿರುದ್ಧ ಕ್ರಮಕೈಗೊಳ್ಳುವಂತೆ ತಮ್ಮ ಕೆಳಹಂತದ ಅಧಿಕಾರಿಗಳು ತಾಕೀತು ಮಾಡಿದ್ದಾರೆ. ತಮ್ಮ ವಾಹನಕ್ಕೆ ಅಡ್ಡಿ ಬಂದಿರುವ ಕಾರಣಕ್ಕಾಗಿ ಯಾಕಯ್ಯನ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಅಂತೆಯೇ, ಅಧಿಕಾರಿಗಳು ಸರ್ಕಾರದಿಂದ ನೆಟ್ಟಿರುವ ಗಿಡಗಳನ್ನು ಮೇಯಿಸಲಾಗುತ್ತಿದೆ ಎಂದು ಆರೋಪದಡಿ ಯಾಕಯ್ಯಗೆ 7,500 ರೂಪಾಯಿ ದಂಡ ವಿಧಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿಯವರು ಎತ್ತು, ಎಮ್ಮೆ, ಹಸು ಸಾಕಿದ್ದಾರಾ?: ಶಾಮನೂರು ಶಿವಶಂಕರಪ್ಪ ಪ್ರಶ್ನೆ

ಅಲ್ಲದೇ, ಈ ದಂಡದ ಮೊತ್ತವನ್ನು ಪಾವತಿಸದೇ ಹೋದಲ್ಲಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದೂ ಯಾಕಯ್ಯಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಭಯಗೊಂಡ ಆತ 7,500 ರೂಪಾಯಿಗಳ ದಂಡ ಪಾವತಿಸಿದ್ದಾರೆ. ಈ ವಿಷಯವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಜಾನುವಾರುಗಳ ಮಾಲೀಕರು ಮತ್ತು ಅವುಗಳನ್ನು ಕಾಯುವವರ ಕೆಂಗಣ್ಣಿಗೂ ಗುರಿಯಾಗಿದೆ. ಹೀಗಾಗಿ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ವರ್ತನೆಯನ್ನು ಖಂಡಿಸಿ ಗ್ರಾಮಸ್ಥರು ಮಂಗಪೇಟೆ ಎಂಪಿಡಿಒ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಎತ್ತು ಮೂತ್ರ ಮಾಡಿದ್ದಕ್ಕೆ ದಂಡ ಬಿದ್ದಿತ್ತು!:ಕಳೆದ ತಿಂಗಳು ಇಂತಹದ್ದೇ ಮತ್ತೊಂದು ವಿಚಿತ್ರ ಘಟನೆ ತೆಲಂಗಾಣದ ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯಲ್ಲೂ ನಡೆದಿತ್ತು. ಸರ್ಕಾರಿ ಸಾಮ್ಯದ ಸಿಂಗರೇಣಿ ಕಲ್ಲಿದ್ದಲು ಗಣಿ ಕಂಪನಿಯ ಪ್ರಧಾನ ವ್ಯವಸ್ಥಾಪಕರ ಕಚೇರಿ ಮುಂದೆ ಎತ್ತು ಮೂತ್ರ ಮಾಡಿದ ಕಾರಣಕ್ಕಾಗಿ ಮಾಲೀಕನಿಗೆ 100 ರೂಪಾಯಿ ದಂಡ ಹಾಕಲಾಗಿತ್ತು.

ಭೂಸ್ವಾಧೀನ ಪರಿಹಾರಕ್ಕಾಗಿ ಆಗ್ರಹಿಸಿ ರೈತ ಸುಂದರ್​ಲಾಲ್​ ಲೋಧ್​ ಎಂಬುವರರು ತಮ್ಮ ಎತ್ತು ಬಂಡಿಯ ಸಮೇತವಾಗಿ ಜಿಎಂ ಕಚೇರಿ ಮುಂದೆ ಕುಟುಂಬಸ್ಥರೊಂದಿಗೆ ಪ್ರತಿಭಟನೆ ನಡೆಸಿದ್ದರು. ಆಗ ಆತನ ಎತ್ತೊಂದು ಕಚೇರಿ ಮುಂದೆ ನಿಂತಿದ್ದ ಜಾಗದಲ್ಲಿ ಮೂತ್ರ ಮಾಡಿತ್ತು. ಇದೇ ಕಾರಣಕ್ಕಾಗಿ ಕಂಪನಿಯವರು ರೈತನ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದರು. ಇದೇ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 270 (ಜೀವಕ್ಕೆ ಅಪಾಯಕಾರಿ ರೋಗ ಹರಡುವ ಮಾರಣಾಂತಿಕ ಕೃತ್ಯ)ರಡಿ ರೈತನಿಗೆ ದಂಡ ವಿಧಿಸಿದ್ದರು.

ಇದನ್ನೂ ಓದಿ:ಕಲ್ಲಿದ್ದಲು ಗಣಿ ಕಚೇರಿ ಮುಂದೆ ಎತ್ತು ಮೂತ್ರ ಮಾಡಿದ್ದಕ್ಕೆ ರೈತನಿಗೆ ಬಿತ್ತು ದಂಡ!

ABOUT THE AUTHOR

...view details