ಮುಂಬೈ(ಮಹಾರಾಷ್ಟ್ರ): ವಾಣಿಜ್ಯ ನಗರಿ ಮುಂಬೈನ ಸೀ ಲಿಂಕ್ ಟೋಲ್ ಪ್ಲಾಜಾದಲ್ಲಿ ನಿಂತಿದ್ದ ಆರು ವಾಹನಗಳಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗುರುವಾರ ರಾತ್ರಿ ಅಪಘಾತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂದ್ರಾ ವರ್ಲಿ ಸೀ ಲಿಂಕ್ ಸಮೀಪ ಅಪಘಾತದಿಂದಾಗಿ ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ತವಾಗಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಅಪಘಾತಕ್ಕೀಡಾದ ಕಾರುಗಳು ತೀವ್ರವಾಗಿ ಹಾನಿಗೊಳಗಾಗಿವೆ.
ಇನ್ನೋವಾ ಕಾರು ವರ್ಲಿ ಕಡೆಗೆ ವೇಗವಾಗಿ ಬರುತ್ತಿತ್ತು. ಚಾಲಕ ಸಿ-ಲಿಂಕ್ ಬರುವ ಮುನ್ನ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಗಾಬರಿಗೊಂಡ ಆತ ಬಾಂದ್ರಾದೆಡೆಗೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಸೀ ಲಿಂಕ್‌ನಲ್ಲಿರುವ ಟೋಲ್ ಪ್ಲಾಜಾದಲ್ಲಿ ಅನೇಕ ವಾಹನಗಳಿದ್ದವು. ಅತಿವೇಗವಾಗಿ ಬಂದ ಕಾರು ಇತರೆ ವಾಹನಗಳಿಗೂ ಡಿಕ್ಕಿ ಹೊಡೆದಿದೆ.
ಸಾವನ್ನಪ್ಪಿದವರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಕಾರು ಚಾಲಕ ಕೂಡ ಗಾಯಗೊಂಡಿದ್ದಾನೆ. ನಾಲ್ವರು ಬಾಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಸ್ಚಾರ್ಜ್ ಆದ ನಂತರ ಚಾಲಕನನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಪೂರ್ವ ಸಿರಿಯಾದ ಇರಾನ್ ಬೆಂಬಲಿತ ನೆಲೆಗಳ ಮೇಲೆ ಅಮೆರಿಕ ದಾಳಿ
ಡಿಸಿಪಿ ಕೃಷ್ಣಕಾಂತ್ ಉಪಾಧ್ಯಾಯ ಪ್ರತಿಕ್ರಿಯಿಸಿ, "ನಿನ್ನೆ ರಾತ್ರಿ 10:15 ರ ಸುಮಾರಿಗೆ ಬಾಂದ್ರಾ ಕಡೆಗೆ ಹೋಗುತ್ತಿದ್ದ ಕಾರೊಂದು ಸೀ ಲಿಂಕ್ ಟೋಲ್ ಪ್ಲಾಜಾಕ್ಕಿಂತ 100 ಮೀಟರ್ ಮೊದಲು ವಾಹನವೊಂದಕ್ಕೆ ಡಿಕ್ಕಿ ಹೊಡೆದಿದೆ. ನಂತರ ತಪ್ಪಿಸಿಕೊಳ್ಳುವ ಭರದಲ್ಲಿ ಚಾಲಕ ಟೋಲ್ ಪ್ಲಾಜಾದಲ್ಲಿ ನಿಂತಿದ್ದ ವಾಹನಗಳಿಗೂ ಗುದ್ದಿದ್ದಾನೆ. ಘಟನೆಯಲ್ಲಿ ಒಟ್ಟು 6 ವಾಹನಗಳು ಜಖಂಗೊಂಡಿವೆ. ಇಲ್ಲಿಯವರೆಗೆ ಒಟ್ಟು 9 ಜನರು ಗಾಯಗೊಂಡಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆ. 6 ಜನರು ಚಿಕಿತ್ಸೆಯಲ್ಲಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ" ಎಂದು ಹೇಳಿದರು.